ಶಿವಮೊಗ್ಗ: ಜಿಲ್ಲೆಯ ಭದ್ರಾವತಿಯ ಹೊರವಲಯದಲ್ಲಿರುವ ಮಿಲಿಟರಿ ಕ್ಯಾಂಪ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕ್ಷಿಪ್ರ ಕಾರ್ಯಪಡೆ ಘಟಕಕ್ಕೆ ಅಡಿಪಾಯ ಹಾಕಿದರು. ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸಚಿವ ಸದಾನಂದ ಗೌಡ, ಪ್ರಹ್ಲಾದ ಜೋಶಿ, ಸಂಸದ ಬಿ.ವೈ.ರಾಘವೇಂದ್ರ ಭಾಗಿಯಾಗಿದ್ದರು.
ಆರ್ಎಎಫ್ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಿ ಬಳಿಕ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ನಾನು ಗೃಹ ಸಚಿವನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಆರ್ಎಎಫ್ ಸ್ಥಾಪನೆಗೆ ನನಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಪತ್ರ ಬರೆದಿದ್ದರು. ನೀವು ಇಲ್ಲಿ ಆರ್ಎಎಫ್ ಘಟನಕ ಸ್ಥಾಪನೆಗೆಗ ಒಪ್ಪಿಗೆ ನೀಡಿದರೆ ನಾವು ರಾಜ್ಯ ಸರ್ಕಾರದಿಂದ ಜಾಗ ನೀಡುವುದಾಗಿ ತಿಳಿಸಿದ್ದರು. 50 ಎಕರೆ ಪ್ರದೇಶದಲ್ಲಿ ಆರ್ಎಎಫ್ ಘಟಕ ಸ್ಥಾಪನೆಯಾಗಲಿದೆ. 1,500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು. 97 ನೇ ಆರ್ಎಎಫ್ ಬೆಟಾಲಿಯನ್ ಇದಾಗಿದ್ದು, 4 ರಾಜ್ಯಗಳ ವ್ಯಾಪ್ತಿಯಲ್ಲಿ 39 ಜಿಲ್ಲೆಗಳನ್ನು ಒಳಗೊಳ್ಳಲಿದೆ. ಭೂಮಿ ನೀಡಿದ್ದಕ್ಕೆ ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸಿದರು.
ಉತ್ತಮವಾಗಿ ಕೊರೊನಾ ನಿಭಾಯಿಸಿದ್ದೇವೆ:ಮೋದಿ ದೂರ ದೃಷ್ಟಿಯಿಂದ ಕೊರೊನಾ ವಿರುದ್ಧ ಸಮರ್ಥವಾಗಿ ಹೋರಾಡಿದ್ದೇವೆ. ವಿಶ್ವದಲ್ಲಿ ನಾವು ಉತ್ತಮವಾಗಿ ಕೊರೊನಾ ನಿಭಾಯಿಸಿದ್ದೇವೆ. ಮೋದಿ ದಿವ್ಯ ದೃಷ್ಟಿ ಕಾರಣದಿಂದ ಯಶಸ್ಸು ಕಂಡಿದ್ದೇವೆ ಎಂದು ಹೇಳಿದರು.
ವ್ಯಾಕ್ಸಿನ್ ವಿಚಾರದಲ್ಲಿ ರಾಜಕೀಯ ಸಹಿಸಲ್ಲ: ದೇಶಾದ್ಯಂತ ಇಂದು ಕೊರೊನಾ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಕೊರೊನಾ ಲಸಿಕೆ ವಿಚಾರದಲ್ಲಿ ರಾಜಕೀಯ ನಡೆಯುತ್ತಿದೆ. ಪ್ರತಿಪಕ್ಷಗಳು ರಾಜಕೀಯ ಮಾಡುತ್ತಿವೆ. ಈ ರೀತಿ ರಾಜಕೀಯ ಮಾಡಿದರೆ ನಾವು ಸಹಿಸಲ್ಲ. ದೇಶದ ಜನರಿಗೆ ಪಿಎಂ ಮೋದಿ ನಾಯಕತ್ವದ ಬಗ್ಗೆ ಗೊತ್ತಿದೆ ಎಂದರು.