ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ಅಬ್ಬರಕ್ಕೆ ಸಾಗರ ಪಟ್ಟಣದ ವರದಾ ರಸ್ತೆಯಲ್ಲಿನ ಉಪ ಕಾರಾಗೃಹದ ಸುಮಾರು 30 ಅಡಿ ಎತ್ತರದ ತಡೆಗೋಡೆ ಕುಸಿದು ಬಿದ್ದಿದೆ. ಭಾನುವಾರ ಘಟನೆ ನಡೆದಿದೆ. ತಡೆಗೋಡೆ ಬಿದ್ದಿರುವುದರಿಂದ ವರದಾ ರಸ್ತೆಯಲ್ಲಿ ಭಾನುವಾರ ವಾಹನ ಸಂಚಾರ ಬಂದ್ ಆಗಿತ್ತು. ಇನ್ನಷ್ಟು ತಡೆಗೋಡೆ ಕುಸಿಯುವ ಭೀತಿಯಿದ್ದು ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಸಾಗರಪೇಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸೀತಾರಾಮ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಈ ರಸ್ತೆಯಲ್ಲಿ ಪ್ರತಿನಿತ್ಯ ವಾಹನ ಸಂಚಾರ ದಟ್ಟಣೆ ಹೆಚ್ಚಿರುತ್ತದೆ. ಆದರೆ ಭಾನುವಾರ ರಜಾದಿನವಾಗಿದ್ದರಿಂದ ಸಂಚಾರ ಕಡಿಮೆ ಇತ್ತು. ಇದರಿಂದಾಗಿ ಯಾವುದೇ ಅನಾಹುತ ನಡೆದಿಲ್ಲ. ತಡೆಗೋಡೆ ಕುಸಿತವಾದಾಗ ಸಾಗರ ಉಪ ಕಾರಾಗೃಹದ ಜೈಲರ್ ಉಮೇಶ್ ಎಸ್.ಹೆಬ್ಬಳ್ಳಿ, ಸಿಬ್ಬಂದಿಗಳಾದ ಕಿರಣ್, ಗಣಪತಿ ಹಾಗೂ ವಿಜೇಂದ್ರ ಅವರು ಸ್ಥಳದಲ್ಲಿ ಹಾಜರಿದ್ದು, ವಾಹನ ಸವಾರರಿಗೆ ಬದಲಿ ರಸ್ತೆಯಲ್ಲಿ ಸಂಚಾರ ಮಾಡುವಂತೆ ಸೂಚಿಸಿದರು.
ವಿಜಯನಗರದಲ್ಲಿ ಮಳೆ ಅನಾಹುತ :ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕು ಹೊಳಲು ಗ್ರಾಮದಲ್ಲಿ ಭಾನುವಾರ ನಿರಂತರ ಮಳೆಗೆ ಮನೆ ಮೇಲ್ಚಾವಣಿ ಕುಸಿದು ಒಂದು ಎಮ್ಮೆ ಹಾಗೂ ಮೂರು ಆಡುಗಳು ಮೃತಪಟ್ಟಿವೆ. ಮನೆಯಲ್ಲಿದ್ದ ಮಹಿಳೆ ಪಾರಾಗಿದ್ದಾರೆ.
ಬಣಕಾರ ಪಾರ್ವತಮ್ಮ ಎಂಬವರ ಮನೆಯ ಹಿಂಭಾಗ ಕುಸಿದಿದೆ. ಮನೆಯಲ್ಲಿ ಕಟ್ಟಿದ್ದ ಒಂದು ಎಮ್ಮೆ, ಮೂರು ಆಡು ಮಣ್ಣಲ್ಲಿ ಸಿಲುಕಿ ಮೃತಪಟ್ಟಿವೆ. ದನಗಳಿಗೆ ಮೇವು ಹಾಕಲು ಹಿರಿಯಮ್ಮ ಎಂಬವರು ಬಂದ ವೇಳೆ ಮೇಲ್ಚಾವಣಿ ಕುಸಿದು ಬಿದ್ದಿದೆ. ಮಣ್ಣಿನಲ್ಲಿ ಸಿಲುಕಿದ ಮಹಿಳೆಯ ರಕ್ಷಿಸಲಾಗಿದೆ. ಸ್ಥಳೀಯರ ಸಹಾಯದಿಂದ ರಕ್ಷಣಾ ಕಾರ್ಯ ನಡೆಯಿತು. ಮಹಿಳೆಯ ಕಾಲು ಮುರಿದಿದ್ದು ಹಾವೇರಿ ಆಸ್ಪತ್ರೆಗೆ ರವಾನಿಸಲಾಗಿದೆ.