ಶಿವಮೊಗ್ಗ:ತಾಲೂಕಿನ ಗೊಂದಿ ಚಟ್ನಹಳ್ಳಿ ಗ್ರಾಮದಲ್ಲಿ ನಿನ್ನೆಯಿಂದ ಗ್ರಾಮ ದೇವತೆ ಕರಿಯಮ್ಮ ಹಾಗೂ ಮಾತಂಗಮ್ಮ ದೇವಿಯರ ಜಾತ್ರೆ ನಡೆಸಲಾಗುತ್ತಿದೆ. ಈ ಗ್ರಾಮದಲ್ಲಿ ಇಂತಹ ಜಾತ್ರೆ ನಡೆದಿದ್ದರ ನೆನಪು ಸಹ ಗ್ರಾಮಸ್ಥರಿಗಿಲ್ಲ. ಆದರೆ ಇದ್ದಕ್ಕಿದ್ದಂತೆಯೇ ಗ್ರಾಮದ ಯುವಕರಿಗೆ ತಮ್ಮ ಗ್ರಾಮದಲ್ಲಿ ದೇವಿಯ ಜಾತ್ರೆ ನಡೆಸಬೇಕೆಂಬ ಆಲೋಚನೆ ಬಂದಿದೆಯಂತೆ.
ದಲಿತರ ಮನೆಯ ದೇವತೆ ಕರಿಯಮ್ಮ: ಗೊಂದಿ ಚಟ್ನಹಳ್ಳಿಯಲ್ಲಿ ಕರಿಯಮ್ಮ ದೇವಿಯು ದಲಿತರ ಮನೆ ದೇವತೆ. ಜಾತ್ರೆಯ ಪ್ರಯುಕ್ತ ದಲಿತರ ಮನೆಯಲ್ಲಿದ್ದ ದೇವಿಯನ್ನು ಇದೀಗ ನಿನ್ನೆ ರಾತ್ರಿಯೇ ಊರಿನ ದೇವಾಲಯಕ್ಕೆ ತರಲಾಗಿದೆ. ಇಂದು ಮತ್ತು ನಾಳೆ ದೇವಿಯನ್ನು ದೇವಾಲದಲ್ಲಿಟ್ಟು ನಾಳೆ ರಾತ್ರಿ ಪುನಃ ದಲಿತರ ಮನೆಗೆ ತೆಗೆದುಕೊಂಡು ಹೋಗಲಾಗುತ್ತದೆ. ಈಗ ಆಚರಿಸಲಾಗುವ ಜಾತ್ರೆ ನಡೆದು ಸುಮಾರು 44 ವರ್ಷಗಳೇ ಕಳೆದಿವೆ ಎನ್ನಲಾಗುತ್ತಿದೆ.
ಗ್ರಾಮ ದೇವತೆಯ ಪೂಜೆಯನ್ನು ಹಿಂದಿನಿಂದಲೂ ದಲಿತರೇ ಮಾಡಿಕೊಂಡು ಬರ್ತಾ ಇದ್ದಾರೆ. ಈಗ ನಡೆಯಲಿರುವ ದೇವಿಯ ಜಾತ್ರೆಯನ್ನು ಗ್ರಾಮದ ಲಿಂಗಾಯತರು, ಮರಾಠರು ಹಾಗೂ ದಲಿತರು ಸೇರಿಕೊಂಡು ಆಚರಣೆ ಮಾಡುತ್ತಿದ್ದಾರೆ.