ಕರ್ನಾಟಕ

karnataka

ETV Bharat / state

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಿ.ಎಸ್.ನಾಗಭೂಷಣ್​ ಇನ್ನಿಲ್ಲ - ಸಾಹಿತಿ ಡಿಎಸ್ ನಾಗಭೂಷಣ್​ ನಿಧನ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಸಾಹಿತಿ ಡಿ.ಎಸ್.ನಾಗಭೂಷಣ್ (70) ಬುಧವಾರ ರಾತ್ರಿ ಶಿವಮೊಗ್ಗದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

kannada-writer-ds-nagabhushan-passed-away
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಿ.ಎಸ್.ನಾಗಭೂಷಣ್​ ಇನ್ನಿಲ್ಲ

By

Published : May 19, 2022, 8:26 AM IST

ಶಿವಮೊಗ್ಗ:ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಿ.ಎಸ್.ನಾಗಭೂಷಣ್ (70) ಬುಧವಾರ ರಾತ್ರಿ ನಿಧನರಾಗಿದ್ದಾರೆ. ನಾಗಭೂಷಣ್ ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ತಿಮ್ಮಸಂದ್ರದವರು. ಸದ್ಯ ಶಿವಮೊಗ್ಗ ವಿನೋಬನಗರದ ಕಲ್ಲಹಳ್ಳಿಯಲ್ಲಿ ನೆಲೆಸಿದ್ದು, ಪತ್ನಿ ಸವಿತಾ ಹಾಗೂ ಅಪಾರ ಸಾಹಿತ್ಯಾಭಿಮಾನಿಗಳನ್ನು ಅಗಲಿದ್ದಾರೆ.

ನಾಗಭೂಷಣ್ ಕಿರು ಪರಿಚಯ:ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಡಿ.ಎಸ್.ನಾಗಭೂಷಣ 1952 ಫೆಬ್ರವರಿ 1ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲೂಕಿನ ತಿಮ್ಮಸಂದ್ರದಲ್ಲಿ ಜನಿಸಿದರು. ದೆಹಲಿ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿ 1975ರಿಂದ 1981ರವರೆಗೆ ಸೇವೆ ಸಲ್ಲಿಸಿದ್ದರು. ಆ ನಂತರದಲ್ಲಿ ಸಹಾಯಕ ನಿಲಯ ನಿರ್ದೇಶಕರಾಗಿ 7 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದರು. 2005ರಲ್ಲಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದ ಅವರು, ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿದ್ದರು.

ಕೃತಿಗಳು:ಇಂದಿಗೆ ಬೇಕಾದ ಗಾಂಧಿ, ಲೋಹಿಯಾ ಜೊತೆಯಲ್ಲಿ, ರೂಪ ರೂಪಗಳನು ಧಾಟಿ, ಕುವೆಂಪು ಒಂದು ಪುನರನ್ವೇಷಣೆ, ಕುವೆಂಪು ಸಾಹಿತ್ಯ ದರ್ಶನ, ಜಯಪ್ರಕಾಶ ನಾರಾಯಣ ಒಂದು ಅಪೂರ್ಣ ಕ್ರಾಂತಿಯ ಕಥೆ, ನಮ್ಮ ಶಾಮಣ್ಣ, ಕನ್ನಡದ ಮನಸು ಮತ್ತು ಇತರ ಲೇಖನಗಳು ಹಾಗೂ ಕಾಲಕ್ರಮ, ಗಮನ, ಅನೇಕ, ಈ ಭೂಮಿಯಿಂದ ಆ ಆಕಾಶದವರೆಗೆ, ಮರಳಿ ಬರಲಿದೆ ಸಮಾಜವಾದ, ವಸಿಷ್ಠರು ಮತ್ತು ವಾಲ್ಮೀಕಿಯರು, ಹಣತೆ (ಜಿಎಸ್ಸೆಸ್ ಅಭಿನಂದನೆ ಗ್ರಂಥ), ಗಾಂಧಿ ಕಥನ ಸೇರಿದಂತೆ ಹಲವು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ.

ಕೇಂದ್ರ ಸಾಹಿತ್ಯ ಅಕಾಡೆಮಿಯು 2021ರ ಸಾಲಿನಲ್ಲಿ ಇವರ ಗಾಂಧಿ ಕಥನಕ್ಕೆ ಪ್ರಶಸ್ತಿ ನೀಡಿ ಗೌರವಿಸಿತ್ತು. ಮಹಾತ್ಮ ಗಾಂಧಿ ಅವರ ಬದುಕಿನ ವಿವರಗಳನ್ನು ನಿರುದ್ವಿಗ್ನವಾಗಿ ಕಟ್ಟಿಕೊಡುವ ಅಪರೂಪದ ಕೃತಿಯು ಹಲವು ಬಾರಿ ಪುನರ್​ ಮುದ್ರಣವಾಗಿದೆ. ಅನೇಕ ಸಾಹಿತ್ಯ ಪ್ರಶಸ್ತಿಗಳು, ಕನ್ನಡ ಸಂಘಟನೆಗಳು ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿವೆ.

ಸಾಂಸ್ಕೃತಿಕ ನಡೆಗಳ ಬಗ್ಗೆ ಖಚಿತವಾಗಿ ಮಾತನಾಡುವ, ಆಳವಾಗಿ ಚಿಂತಿಸುವ, ನೇರವಾಗಿ ಬರೆಯುವ ಡಿ.ಎಸ್‍. ನಾಗಭೂಷಣ್​ ಸಮಕಾಲೀನ ಸಂದರ್ಭದಲ್ಲಿ ಮುಖ್ಯ ಚಿಂತಕರಾಗಿದ್ದಾರೆ. ಇವರು ಸಂಪಾದಿಸುತ್ತಿರುವ ಹೊಸ ಮನುಷ್ಯ ಸಮಾಜವಾದದ ಹಿನ್ನೆಲೆಯಲ್ಲಿ ಸಮಕಾಲೀನ ಭಾರತದ ವಿದ್ಯಮಾನಗಳ ವಿಶ್ಲೇಷಣೆಗೆ ಮುಖ್ಯ ವೇದಿಕೆಯಾಗಿದೆ. ಮೃತರ ಅಂತಿಮ ದರ್ಶನಕ್ಕೆ ಕಲ್ಲಹಳ್ಳಿಯ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಂಜೆ ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ಶವಸಂಸ್ಕಾರ ನಡೆಯಲಿದೆ.

ಇದನ್ನೂ ಓದಿ:ಸದ್ದಿಲ್ಲದೆ ಸ್ಥಗಿತಗೊಂಡ ಸಂಪುಟ ವಿಸ್ತರಣೆ ಕಸರತ್ತು; ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಭ್ರಮನಿರಸನ

ABOUT THE AUTHOR

...view details