ಶಿವಮೊಗ್ಗ:ಶಿಕಾರಿಪುರ ತಾಲೂಕು ಕಾಳೇನಹಳ್ಳಿಯ ಶಿವಯೋಗ ಮಂದಿರದ ರೇವಣಸಿದ್ದ ಸ್ವಾಮಿಗಳು ಇಂದು ಮುಂಜಾನೆ ಲಿಂಗೈಕ್ಯರಾಗಿದ್ದಾರೆ. ರೇವಣಸಿದ್ದ ಸ್ವಾಮಿಗಳು ಕಾಳೇನಹಳ್ಳಿಯ ಮೂರನೇ ಪೀಠಾಧಿಪತಿಗಳಾಗಿದ್ದರು.
ಶ್ರೀಗಳು ಫೆ.1, 1977 ರಂದು ಪಟ್ಟಾಧಿಕಾರ ವಹಿಸಿಕೊಂಡು ಸುಮಾರು 44 ವರ್ಷಗಳ ಕಾಲ ಮಠವನ್ನು ಮುನ್ನಡೆಸಿದ್ದಾರೆ. ಶಿಕಾರಿಪುರ ತಾಲೂಕಿನ ನಡೆದಾಡುವ ದೇವರು ಎಂದೇ ಪ್ರಸಿದ್ದಿ ಪಡೆದುಕೊಂಡಿದ್ದರು. ರೇವಣಸಿದ್ದ ಸ್ವಾಮಿಗಳು ಸಾವಿರಾರು ಭಕ್ತರನ್ನು ಹೊಂದಿದ್ದರು.
ವೀರಶೈವ ಮಹಾಸಭೆಯ ಸ್ಥಾಪಕರು ಹಾಗೂ ಶಿವಯೋಗ ಮಂದಿರದ ಸ್ಥಾಪಕರೂ ಆದ ಹಾನಗಲ್ ಶ್ರೀಕುಮಾರ ಸ್ವಾಮಿಗಳು ಮಲೆನಾಡಿಗೆ ಧರ್ಮ ಪ್ರಚಾರಕ್ಕೆ ಬಂದಾಗ ಭಕ್ತರ ಅಪೇಕ್ಷೆಯಂತೆ ಕುಮದ್ವತಿ - ವೃಷಭಾವತಿ ನದಿಗಳ ಸಂಗಮ ಕ್ಷೇತ್ರದಲ್ಲಿ 1912ರಲ್ಲಿ ಶಿವಯೋಗ ಮಂದಿರ ಸ್ಥಾಪಿಸಿದ್ದರು.
ವಿಜಯಪುರ ಜಿಲ್ಲೆ ಬಸವನಬಾಗೇವಾಡಿಯಲ್ಲಿ ಜನಿಸಿದ ಸ್ವಾಮೀಜಿಯವರು ಬಾಲ್ಯಾವಸ್ಥೆಯಲ್ಲಿಯೇ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದರು. ಅಧ್ಯಾತ್ಮಿಕ ಉನ್ನತಿ ಸಾಧಿಸಿದ್ದರು. ಅವರು ತಮ್ಮ ಸಮಾಜಮುಖಿ ಚಿಂತನೆಗಳ ಮೂಲಕ ಎಲ್ಲರಿಗೂ ಮಾರ್ಗದರ್ಶಕರಾಗಿದ್ದರು.
ಸಿಎಂ ಯಡಿಯೂರಪ್ಪ, ಸಂಸದ ರಾಘವೇಂದ್ರ ಸಂತಾಪ: "ಸ್ವಾಮಿಜೀಗಳು ಎಲ್ಲ ಧರ್ಮದವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದ ಸ್ವಾಮೀಜಿ ಅವರ ನಿಧನದಿಂದ ನಾವು ಹಿರಿಯ ಅಧ್ಯಾತ್ಮಿಕ ಚೇತನ ಕಳೆದುಕೊಂಡಿದ್ದೇವೆ. ಭಗವಂತ ಮೃತರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ" ಎಂದು ತಮ್ಮ ಸಂದೇಶದಲ್ಲಿ ಪ್ರಾರ್ಥಿಸಿದ್ದಾರೆ.