ಶಿವಮೊಗ್ಗ: ಕಾಡಾದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ರೈತರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತುಂಗಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ ಹೇಳಿದರು.
ಇಂದು ಪತ್ರಿಕಾಭವನದಲ್ಲಿ ಪ್ರೆಸ್ ಟ್ರಸ್ಟ್ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿ ಅವರು ಕಾಡಾ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗಾಗಿ 400 ಕೋಟಿ ರೂ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದೆ. ಮುಖ್ಯಮಂತ್ರಿಗಳು ನಮ್ಮ ಮನವಿ ಪರಿಶೀಲಿಸಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಆದರೆ, ಕೋವಿಡ್ನಿಂದಾಗಿ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದ್ದು, ಅನುದಾನ ಸಿಗುವ ಭರವಸೆ ಇದೆ ಎಂದು ತಿಳಿಸಿದರು.
ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ ಮಾಧ್ಯಮ ಸಂವಾದ ಆಹಾರದ ಬೆಳೆ ಪದ್ದತಿಗೆ ಆದ್ಯತೆ ಕೊಡಲಾಗುವುದು. ಈ ಬಗ್ಗೆ ಸರ್ಕಾರದ ಗಮನಕ್ಕೂ ತರಲಾಗುವುದು. ಶೇ.80ರಷ್ಟು ನೀರು ತೋಟಗಾರಿಕೆ ಬೆಳೆಗಳಿಗೆ ಬಳಕೆಯಾಗುತ್ತಿದೆ. ಭತ್ತ ಬೆಳೆಯುವ ರೈತರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಆಹಾರದ ಬೆಳೆಗೆ ನೀರು ಹರಿಸುವ ಬಗ್ಗೆ ಚಿಂತನೆಯ ಅಗತ್ಯವಿದೆ. ವಿವಿಧ ಅಭಿವೃದ್ಧಿ ಕಾರ್ಯಗಳಿಗೆ 40 ಕೋಟಿ ಕೆಲಸಕ್ಕೆ ರೈತರಿಂದ ಅರ್ಜಿಗಳು ಬಂದಿವೆ. ಆದರೆ, ಹಣಕಾಸಿನ ಕೊರತೆಯಿಂದಾಗಿ ಅಭಿವೃದ್ಧಿ ಕಾರ್ಯಗಳನ್ನು ಸರಿಪಡಿಸುವ ಉದ್ದೇಶದಿಂದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಕಾರಿ ಅವರಿಗೆ ಮನವಿ ಮಾಡಿದ್ದು, ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ಮಾಡಲು 15 - 20 ಲಕ್ಷ ರೂ. ಬಿಡುಗಡೆ ಮಾಡಿದ್ದಾರೆ. ಇದರಿಂದ ಒಂದಿಷ್ಟು ಕೆಲಸ ಮಾಡಲು ಸಾಧ್ಯವಾಗಿದೆ.
ಕಾಡಾ ಇರುವುದು ರೈತರಿಗೆ ಸೌಲಭ್ಯ ನೀಡಲು. ಯಾವುದೇ ರೈತರು ಸೌಲಭ್ಯ ಕೇಳಿದರು ಪ್ರಾಮಾಣಿಕವಾಗಿ ಅದನ್ನು ಕೊಡಲು ಕ್ರಮ ಕೈಗೊಳ್ಳಲಾಗುತ್ತದೆ. ಭದ್ರಾ ನಾಲೆ ಆಧುನೀಕರಣ ಕೂಡ ಸಮರ್ಪಕವಾಗಿಲ್ಲ. ಇದರಿಂದ ಅನೇಕ ರೈತರ ಗದ್ದೆಗೆ ನೀರು ತಲುಪುವುದಿಲ್ಲ. ಹಾಗಾಗಿ ನಾಲೆಗಳಲ್ಲಿ ನೀರು ಪೋಲಾಗದಂತೆ ಡ್ರಿಪ್ ಮೂಲಕ ನೀರು ಹರಿಸಲು ಯೋಜನೆ ರೂಪಿಸಲಾಗಿದೆ. ಒಟ್ಟಾರೆ ಕಟ್ಟಕಡೆಯ ರೈತನಿಗೂ ನೀರು ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು ನನ್ನ ಅವಧಿಯಲ್ಲಿ ಮಾಡುತ್ತೇನೆ. ರೈತ ಹೋರಾಟದಿಂದ ಬಂದ ನನಗೆ ಕಾಡಾ ಅದ್ಯಕ್ಷೆಯನ್ನಾಗಿ ನೇಮಿಸಿದ ಮುಖ್ಯಮಂತ್ರಿಗಳಿಗೆ ಸಂಸದರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.