ಶಿವಮೊಗ್ಗ: ಚುನಾವಣೆಗೆ ಇನ್ನೂ ಹಲವಾರು ತಿಂಗಳು ಬಾಕಿ ಇರುವಾಗಲೇ ಅಭ್ಯರ್ಥಿಯನ್ನು ಘೋಷಣೆ ಮಾಡಿದ ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ‘ದೇಶದ ರಾಜಕೀಯ ವ್ಯವಸ್ಥೆಯಲ್ಲಿ ವಿವಿಧ ಸ್ಥರಗಳ ಅಧಿಕಾರ ಹೊಂದಿರುವವರು ಅವರವರ ಇತಿಮಿತಿಗಳಲ್ಲಿ ನಡೆದುಕೊಳ್ಳಬೇಕು.’ ಕೊಪ್ಪಳದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಚುನಾವಣೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು ತಪ್ಪು ಎಂದು ಈಶ್ವರಪ್ಪ ಕಿಡಿಕಾರಿದ್ದಾರೆ.
ಅರ್ಜಿ ಹಾಕುವ ಸಂದರ್ಭ ಇನ್ನು ಮುಗಿಯುವ ಮೊದಲೇ ಟಿಕೆಟ್ ಘೋಷಣೆ ಮಾಡಿದ್ದಾರೆ. ಇದು ಒಂದು ರೀತಿಯ ರಾಜಕೀಯ ವ್ಯಭಿಚಾರ. ಬಿಜೆಪಿ ಪಕ್ಷ ಕಾಂಗ್ರೆಸ್ ವ್ಯವಸ್ಥೆಯಿಂದ ಬೆಳೆದಿಲ್ಲ. ರಾಷ್ಟ್ರೀಯ ವಿಚಾರಧಾರೆಗಳನ್ನು ಇಟ್ಟುಕೊಂಡು ಬೆಳೆದಿದೆ ಎಂದರು.
ವೋಟರ್ ಐಡಿ ಹಗರಣ ಪ್ರಜಾಪ್ರಭುತ್ವಕ್ಕೆ ಅವಮಾನ: ವೋಟರ್ ಐಡಿ ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ವೋಟರ್ ಐಡಿ ಹಗರಣ ಪ್ರಜಾಪ್ರಭುತ್ವಕ್ಕೆ ಅಪಮಾನ. ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ದ್ರೋಹ. ಮತದಾನದ ಹಕ್ಕನ್ನು ತರಲು ಹಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಆಧುನಿಕ ವ್ಯವಸ್ಥೆಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಿರಬೇಕು ಮಾರಕವಾಗಿರಬಾರದು ಎಂದರು.
ಮತದಾನ ಮಾಡದೇ ಇರುವವರಿಗೆ ಈ ಪ್ರಕರಣ ಉತ್ತೇಜನ ಕೊಟ್ಟಂತೆ:ಇದನ್ನು ಯಾರೇ ಮಾಡಿದರೂ ಇದು ನಾಗರಿಕ ಸಮಾಜ ತಲೆತಗ್ಗಿಸುವ ವ್ಯವಸ್ಥೆ, ಕಳೆದ ಸರ್ಕಾರದ ಅವಧಿಯಲ್ಲೂ ಇದು ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರ ಗಮನ ಕೊಡಬೇಕು. ಬಿಜೆಪಿ, ಕಾಂಗ್ರೆಸ್ ಎಂದು ನಾನು ಹೇಳುವುದಿಲ್ಲ ಯಾರದೇ ಅವಧಿಯಲ್ಲಿ ನಡೆದರೂ ತಪ್ಪು. ಈ ಅಕ್ರಮದ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಮತದಾನಕ್ಕೆ ಬಾರದೇ ಸೋಂಬೇರಿಗಳಾಗಿ ಇರುವವರಿಗೆ ಇದು ಬೆಂಬಲ ನೀಡಿದಂತೆ ಆಗುತ್ತದೆ.
ಪ್ರಜಾಪ್ರಭುತ್ವದ ಮತದಾನದ ಹಕ್ಕು ಸಂಪೂರ್ಣ ಸದುಪಯೋಗ ಆಗಬೇಕು. ವೋಟರ್ ಐಡಿ ಅಕ್ರಮಕ್ಕೆ ಸಂಬಂಧಪಟ್ಟಂತೆ ಊಹೆಗಳು ಸತ್ಯವೋ? ಸುಳ್ಳೋ? ಗೊತ್ತಿಲ್ಲ ಸಮಗ್ರ ತನಿಖೆ ನಡೆದಾಗ ಮಾತ್ರ ಸತ್ಯಾಂಶ ಹೊರಬರುತ್ತದೆ ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:ಚಿಲುಮೆ ಸಂಸ್ಥೆ ದೇಶದ್ರೋಹದ ಕೆಲಸ ಮಾಡಿದೆ : ಮಾಜಿ ಸಚಿವ ಕೆ ಎಸ್ ಈಶ್ವರಪ್ಪ