ಶಿವಮೊಗ್ಗ :ಜಿಲ್ಲೆಯಲ್ಲಿ ಕೊರೊನಾ ಸೋಂಕನ್ನು ತಡೆಯುವ ದೃಷ್ಟಿಯಿಂದ ನಾಳೆ ಸಂಘ-ಸಂಸ್ಥೆಗಳ ಸಭೆಯನ್ನು ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಗ್ರಾಮೀಣ ಭಾಗದಲ್ಲೂ ಕೊರೊನಾ ಪ್ರಭಾವ ಹೆಚ್ಚಿದೆ. ಹೀಗಾಗಿ ಇದರ ತಡೆ ಸಲುವಾಗಿ ಸಂಘ-ಸಂಸ್ಥೆಗಳ ಸಭೆ ಕರೆಯಲಾಗಿದೆ. ನಾಳೆ ಅವರೆಲ್ಲಾ ನೀಡುವ ತೀರ್ಮಾನದ ಮೇಲೆ ನಾವು ನಡೆದುಕೊಳ್ಳುತ್ತೇವೆ ಎಂದರು.
ಕೊರೊನಾ ಕುರಿತಂತೆ ಸಚಿವ ಕೆ ಎಸ್ ಈಶ್ವರಪ್ಪ ಮಾಹಿತಿ.. ಕೋವಿಡ್ ಆಸ್ಪತ್ರೆಯ ವಿಸ್ತರಣೆ: ಸದ್ಯ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಇಲ್ಲಿ 150 ಬೆಡ್ ಗಳಿವೆ. ಜಿಲ್ಲೆಯ ಗಾಜನೂರಿನ ಮೂರಾರ್ಜಿ ಶಾಲೆಯಲ್ಲಿ 100 ಬೆಡ್‌ನ ಆಸ್ಪತ್ರೆ ಮಾಡಲಾಗುವುದು ಹಾಗೂ ಭದ್ರಾವತಿಯ ವಿಐಎಸ್‌ನಲ್ಲೂ ಸಹ 50 ಬೆಡ್‌ನ ಆಸ್ಪತ್ರೆ ತಯಾರು ಮಾಡಲಾಗುತ್ತಿದೆ ಎಂದರು.
ಗ್ರಾಮೀಣ ಭಾಗದಲ್ಲೂ ಸಹ ಕೊರೊನಾ ಹರಡುತ್ತಿರುವುದು ಆಂತಕದ ವಿಚಾರ. ಸದ್ಯ ನಮ್ಮ ಜಿಲ್ಲೆಯಲ್ಲಿ ಸಮುದಾಯಕ್ಕೆ ಹರಡಿಲ್ಲ ಎಂದು ಸ್ಪಷ್ಟಪಡಿಸಿದರು. ಲಾಕ್ಡೌನ್ ಅವಧಿಯಲ್ಲಿ ಜನ ಸುಮ್ಮನೆ ಓಡಾಡುವುದನ್ನು ಬಿಡಬೇಕು. ಓಡಾಡುವಾಗ ಮಾಸ್ಕ್ ಹಾಕಿಕೊಳ್ಳಬೇಕು. ಹೆಚ್ಚಿನ ಜನ ಗುಂಪು ಸೇರಬಾರದು. ವಯಸ್ಸಾದವರು ಹೆಚ್ಚಾಗಿ ಓಡಾಟ ಮಾಡಬಾರದು ಎಂದು ವಿನಂತಿಸಿದರು.
ಜಿಲ್ಲೆಯಲ್ಲಿ ಕೋವಿಡ್-19ಗೆ ನಾಲ್ಕನೇ ಬಲಿ :ಕೋವಿಡ್-19ಗೆ ಜಿಲ್ಲೆಯಲ್ಲಿ ಮತ್ತೊಂದು ಬಲಿಯಾಗಿದೆ. ನಗರದ ಟ್ಯಾಂಕ್ ಮೊಹಲ್ಲದ 78 ವರ್ಷದ ಅಜ್ಜಿ ಕೊರೊನಾಗೆ ಬಲಿಯಾಗಿದೆ. ಮೃತ ಅಜ್ಜಿಯ ಸ್ವಾಬ್ ಪರೀಕ್ಷೆ ನಡೆಸಿದಾಗ ಕೊರೊನಾ ಪಾಸಿಟಿವ್ ಬಂದಿದೆ. ನಮ್ಮ ಜಿಲ್ಲೆಯಲ್ಲಿ ಹೆಚ್ಚಿನ ಜನ, ಕೊರೊನಾ ಕೇಸ್ಗಳಿಲ್ಲ ಎಂದು ಗುಂಪು ಸೇರುವುದನ್ನು ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಜಿಲ್ಲಾಧಿಕಾರಿ ಕೆ ಬಿ ಶಿವಕುಮಾರ್ ತಿಳಿಸಿದ್ದಾರೆ.