ಶಿವಮೊಗ್ಗ:ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಆಜಾನ್ ಕೂಗಿದ್ದು, ಸಂವಿಧಾನ ವಿರೋಧಿ ನೀತಿಯಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಕೆ. ಎಸ್ ಈಶ್ವರಪ್ಪ ತಿಳಿಸಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಜಾನ್ ಕೂಗುವ ಮೂಲಕ ಎಸ್ಡಿಪಿಐ ಕೋಮುಸೌಹಾರ್ದವನ್ನು ಹಾಳು ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.
ವಿಧಾನಸೌಧದಲ್ಲೂ ನಾವು ಆಜಾನ್ ಕೂಗುತ್ತೇವೆ ಎಂದಿದ್ದಾರೆ: ಇಂಥವರ ವಿರುದ್ಧ ಸರಿಯಾದ ಕ್ರಮ ತೆಗೆದುಕೊಳ್ಳಬೇಕು. ಆಜಾನ್ ಕೂಗಿದ ಯುವಕನ ವಿರುದ್ಧ ಸರಿಯಾದ ಕ್ರಮ ತೆಗೆದುಕೊಳ್ಳಬೇಕೆಂದು ನಾನು ಸಿಎಂಗೆ ಮನವಿ ಮಾಡುತ್ತೇನೆ. ಈತನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಆಜಾನ್ ಕೂಗುವ ನೆಪದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರೇ ಈ ಕೃತ್ಯ ಎಸಗಿದ್ದಾರೆ. ಅಷ್ಟೇ ಅಲ್ಲದೇ ವಿಧಾನಸೌಧದಲ್ಲೂ ನಾವು ಆಜಾನ್ ಕೂಗುತ್ತೇವೆ ಎಂದಿದ್ದಾರೆ. ಇದು ಸಂವಿಧಾನ ವಿರೋಧಿ ನಡೆ. ಯಾರು ಸಂವಿಧಾನದ ವಿರುದ್ಧ ನಡೆದುಕೊಳ್ಳುತ್ತಾರೋ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದರು. ಇಲ್ಲವೆಂದ್ರೆ ಈ ಕೋಮುಸೌಹಾರ್ದತೆಗೆ ಧಕ್ಕೆ ಉಂಟಾಗಿ ಜನ ಸಮಸ್ಯೆ ಅನುಭವಿಸಬೇಕಾಗುತ್ತದೆ ಎಂದು ಈಶ್ವರಪ್ಪ ಹೇಳಿದರು.
ಆಜಾನ್ ಕೂಗುವ ಕುರಿತು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ. ಯಾವವ ಸಂದರ್ಭದಲ್ಲಿ ಆಜಾನ್ ಕೂಗಬೇಕು, ಆಜಾನ್ ಕೂಗುವಾಗ ಎಷ್ಟು ಸೌಂಡ್ ಇಟ್ಟುಕೊಳ್ಳಬೇಕು ಎಂಬುದನ್ನು ಈಗಾಗಲೇ ಹೇಳಿದೆ. ಇದೆಲ್ಲವನ್ನು ಮೀರಿ ಆಜಾನ್ ಕೂಗುವಂತಹ ಪ್ರಯತ್ನವನ್ನು ಕೆಲವರು ನಡೆಸುತ್ತಿದ್ದಾರೆ. ನಾನು ನಮ್ಮ ವಿಜಯಸಂಕಲ್ಪ ಯಾತ್ರೆಯ ಸಂದರ್ಭದಲ್ಲಿ ಕೊಡಗು ಪೇಟೆಯ ವಿರಾಜಪೇಟೆ ತಾಲೂಕಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿರುವ ಸಂದರ್ಭದಲ್ಲಿ ಆಜಾನ್ ಕೂಗಿದ್ರು ಎಂದರು.