ಶಿವಮೊಗ್ಗ: ರಾಜ್ಯದ ಪಠ್ಯ ಪುಸ್ತಕದಲ್ಲಿ ಭಾರತೀಯ ಸಂಸ್ಕೃತಿಯನ್ನು ತಲುಪಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರು ವಿರೋಧ ಪಕ್ಷಗಳಿಗೆ ಟಾಂಗ್ ನೀಡಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದೆ ಬರಗೂರು ರಾಮಚಂದ್ರಪ್ಪ ಅಧ್ಯಕ್ಷರಾದ ಅವಧಿಯಲ್ಲಿ ಅವರ ವಿಚಾರಕ್ಕೆ ತಕ್ಕಂತೆ ಪಠ್ಯ ಪುಸ್ತಕಗಳನ್ನು ತಂದಿದ್ದರು. ಇವತ್ತು ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿಯನ್ನು ತಲುಪಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತಿದೆ ಎಂದರು.
ಯಾವುದು ಸರಿ ಇಲ್ಲ ಎಂಬ ಅಂಶದ ಬಗ್ಗೆ ಪ್ರಾಮಾಣಿಕವಾಗಿ ತಿದ್ದಿಕೊಳ್ಳಿ ಎಂದು ಹೇಳಿ ತಿದ್ದಿಸಬೇಕಿತ್ತು. ಆದರೆ, ಇದರಲ್ಲಿ ರಾಜಕೀಯ ತಂದು, ಅವರ ವೈಚಾರಿಕ ಸಿದ್ದಾಂತಗಳನ್ನು ಇಲ್ಲಿಗೆ ತಂದು ರಾಜ್ಯದಲ್ಲಿ ಗೊಂದಲ ಸೃಷ್ಟಿಸುವ ಕೆಲಸವನ್ನು ಕೆಲವು ಸಾಹಿತಿಗಳು ಮಾಡುತ್ತಿದ್ದಾರೆ. ಯಾವುದು ಸರಿ ಇಲ್ಲ ಎಂಬುದನ್ನು ಮಾಧ್ಯಮಗಳಿಗೆ ಹೇಳಿಕೆ ನೀಡುವುದು, ನಮ್ಮ ಪಠ್ಯವನ್ನು ವಾಪಸ್ ತೆಗೆದುಕೊಳ್ಳಿ ಎಂದು ಹೇಳುವ ಮೂಲಕ ಸಾಹಿತಿಗಳು ಸಹ ರಾಜಕೀಯ ಮಾಡುತ್ತಿದ್ದಾರೆ. ಒಂಬತ್ತು ಜನ ನಮ್ಮ ಪಠ್ಯ ಬೇಡ ಎಂದು ಪತ್ರ ಬರೆದಿದ್ದಾರೆ.