ಶಿವಮೊಗ್ಗ:ರಾಜ್ಯ ಸಚಿವ ಸಂಪುಟದಲ್ಲಿ ಖಾಲಿ ಇರುವ ನಾಲ್ಕು ಸಚಿವ ಸ್ಥಾನ ತುಂಬುವ ಕುರಿತು ಪಕ್ಷದ ವರಿಷ್ಠರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೆ. ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕ್ಯಾಬಿನೆಟ್ ವಿಸ್ತರಣೆ ಕುರಿತು ಈಗ ಚರ್ಚೆ ನಡೆಯುತ್ತಿರುವುದು ಸ್ವಾಭಾವಿಕ. ಸದ್ಯ ನಾಲ್ಕು ಪೋಸ್ಟ್ ಖಾಲಿ ಇವೆ. ಚುನಾವಣೆಗೆ ಒಂದು ವರ್ಷ ಮೂರು ಬಾಕಿಯಿದೆ. ರಾಷ್ಟ್ರೀಯ ನಾಯಕರು ಈ ಕುರಿತು ಚರ್ಚೆ ಮಾಡಿ, ಯಾರಿಗೆ ಯಾವ ಸ್ಥಾನ ಕೊಟ್ಟರೆ ಒಳ್ಳೆಯದು ಎಂದು ಚಿಂತನೆ ಮಾಡ್ತಾರೆ ಎಂದರು.
ರಾಜ್ಯದ ಹಿತದೃಷ್ಟಿ, ಜಿಲ್ಲೆ, ಎಲ್ಲಾ ಸಮಾಜವನ್ನು ಪರಿಗಣಿಸಿ ಈ ನಾಲ್ಕು ಸ್ಥಾನಗಳನ್ನು ತುಂಬ್ತಾರೆ. ವರಿಷ್ಠರ ತೀರ್ಮಾನದ ಕುರಿತು ಯಾವುದೇ ಗೊಂದಲ ಇಲ್ಲ. ಒಂದು ಹುದ್ದೆ ಇದ್ದಾಗ ರಾಜಕೀಯ ಆಕಾಂಕ್ಷಿಗಳು ಸಹ ಇರೋದು ಸ್ವಾಭಾವಿಕವಾಗಿದೆ.
ನಾನು ಮಂತ್ರಿ ಅಗ್ಬೇಕು ಅಂತ ಎಲ್ಲಾ ಎಂಎಲ್ಎ, ಎಂಎಲ್ಸಿ ಯೋಚನೆ ಮಾಡ್ತಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ. ಕೇಂದ್ರದ ನಾಯಕರು ಯಾರಿಗೆ ಘೋಷಣೆ ಮಾಡ್ತಾರೋ ಅವರು ಒಪ್ಕೋತ್ತಾರೆ. ಉಳಿದ ಬಿಜೆಪಿ ನಾಯಕರು ಅವರಿಗೆ ಸಹಕಾರ ಕೊಡ್ತಾರೆ. ನಮ್ಮ ಪಕ್ಷದಲ್ಲಿ ಹಿಂದಿನಿಂದಲೂ ಅದೇ ನಡೆದುಕೊಂಡು ಬಂದಿದೆ. ಮುಂದೆ ಕೂಡ ತುಂಬಾ ಚೆನ್ನಾಗಿ ನಡೆಯುತ್ತೆ ಎಂದರು.
ರಾಜ್ಯದ ಅಧ್ಯಕ್ಷರ ಬದಲಾವಣೆ ಚರ್ಚೆ ಬಿಲ್ಕುಲ್ ಇಲ್ಲ..ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯ ಪ್ರಶ್ನೆಯೇ ಇಲ್ಲ. ಅವರು ಉತ್ತಮವಾಗಿ ಕೆಲಸ ಮಾಡ್ತಾ ಇದ್ದಾರೆ. ಸಚಿವ ಸಂಪುಟದಲ್ಲಿ ಸ್ಥಾನ ಖಾಲಿ ಇರುವುದರಿಂದ ಅದಕ್ಕೆ ಚರ್ಚೆ ಮಾಡ್ತಾರೆ. ರಾಜ್ಯಾಧ್ಯಕ್ಷರ ಸ್ಥಾನ ಖಾಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆಯ ಪ್ರಶ್ನೆಯೇ ಉದ್ಭವವಾಗಲ್ಲ. ಮುಂದಿನ ಚುನಾವಣೆ ದೃಷ್ಟಿಯಿಂದ ನಳಿನ್ ಕುಮಾರ್ ಕಟೀಲ್ ಅವರು ಕೆಲಸ ಮಾಡ್ತಿದ್ದಾರೆ. ಬೂತ್ ಹಾಗೂ ಪೇಜ್ ಮಟ್ಟದ ಕಮಿಟಿಯನ್ನು ಸಹ ಮಾಡಿದ್ದಾರೆ.