ಶಿವಮೊಗ್ಗ: ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್ನವರಿಗೆ ಯಾವುದೇ ನೈತಿಕತೆ ಇಲ್ಲ. ಕಾಂಗ್ರೆಸ್ನವರು ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ರೆ ಅದು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ ಎಂದು ಕಾಂಗ್ರೆಸ್ ವಿರುದ್ಧ ಸಚಿವ ಈಶ್ವರಪ್ಪ ಕಿಡಿಕಾರಿದ್ದಾರೆ.
ಶಿವಮೊಗ್ಗದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಸರ್ಕಾರದ ಒಂದೇ ಒಂದು ಭ್ರಷ್ಟಾಚಾರವನ್ನು ಬಯಲಿಗೆ ಎಳೆಯಲು ಸಿದ್ದರಾಮಯ್ಯನವರಿಗೆ ಆಗಲಿಲ್ಲ. ಅವರು ವಿರೋಧ ಪಕ್ಷದ ನಾಯಕರಾಗಿರುವಲ್ಲಿ ವಿಫಲರಾಗಿದ್ದಾರೆ ಎಂದರು.
ಡಿ.ಕೆ.ಶಿವಕುಮಾರ್ ಏಕೆ ಜೈಲಿಗೆ ಹೋಗಿ ಬಂದ್ರು? ಅವರಿನ್ನೂ ಪೂರ್ಣವಾಗಿ ಆರೋಪದಿಂದ ಹೊರ ಬಂದಿಲ್ಲ ಎಂದರು. ಮಸ್ಕಿ, ಬಸವಕಲ್ಯಾಣದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಪಕ್ಷಾಂತರಿಗಳಿಗೆ ಮತ ಹಾಕಬೇಡಿ, ಅವರು ಹಣ ಪಡೆದುಕೊಂಡು ಪಕ್ಷಾಂತರ ಮಾಡಿದ್ದಾರೆ ಎನ್ನುತ್ತಿದ್ದಾರೆ. ಹಾಗಾದ್ರೆ, ಸಿದ್ದರಾಮಯ್ಯ ಕಾಂಗ್ರೆಸ್ಗೆ ಬಂದಾಗ ಎಷ್ಟು ಹಣ ಪಡೆದುಕೊಂಡು ಬಂದಿದ್ರು ಎಂದು ಪ್ರಶ್ನೆ ಮಾಡಿದ್ದಾರೆ.
ವಿದೂಷಕ ಪದ ಬಳಕೆಗೆ ಖಂಡನೆ:
ಸಿದ್ದರಾಮಯ್ಯನವರು ನಮ್ಮ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ಗೆ ವಿದೂಷಕ ಎಂಬ ಪದ ಬಳಕೆ ಮಾಡಿರುವುದನ್ನು ಖಂಡಿಸುತ್ತೇನೆ. ಈ ರೀತಿಯ ಪದ ಬಳಕೆ ಮಾಡಬೇಡಿ ಎಂದು ಹಿಂದೆಯೂ ಅನೇಕ ಸಲ ಹೇಳಿದ್ದೇನೆ. ಸಿದ್ದರಾಮಯ್ಯ ತಮ್ಮ ಪದ ಬಳಕೆಯ ಬಗ್ಗೆ ಸುಧಾರಿಸಬೇಕಿದೆ. ಸಿದ್ದರಾಮಯ್ಯನವರು ಪ್ರಧಾನಮಂತ್ರಿ, ಮುಖ್ಯಮಂತ್ರಿಗಳಿಗೆ ಏಕವಚನದಲ್ಲಿ ಪದ ಬಳಕೆ ಮಾಡುತ್ತಾರೆ. ನನಗೂ ಏ ಸಿದ್ದರಾಮಯ್ಯ ನಿಂಗ್ ಬುದ್ದಿ ಇಲ್ವೇನಲೇ ಅಂತಾ ಕೇಳಕ್ಕೆ ಬರುವುದಿಲ್ವಾ? ಆದರೆ ಈ ರೀತಿಯ ಪದವನ್ನು ನಾನು ಬಳಕೆ ಮಾಡಲ್ಲ ಎಂದರು.
ನಮ್ಮದು ಹಂಚಿ ತಿನ್ನುವ ಸಂಸ್ಕೃತಿ:
ಕೊರೊನಾ ಸಂಬಂಧ ಸರ್ವಪಕ್ಷ ಸಭೆ ಕರೆದಿದಕ್ಕೆ ಡಿ.ಕೆ.ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದರು. ಕೊರೊನಾ ನಿರ್ವಹಣೆ ಮಾಡಲು ಆಗುತ್ತಿಲ್ಲ. ಇದರಿಂದ ರಾಜ್ಯ ಸರ್ಕಾರ ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಿ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ನವರಿಗೆ ಅರ್ಜೆಂಟ್ ಆಗಿ ಅಧಿಕಾರಕ್ಕೆ ಬರಬೇಕಿದೆ. ಬೇರೆ ದೇಶಗಳಿಗೆ ಕೊರೊನಾ ಲಸಿಕೆ ರಫ್ತು ಮಾಡುವುದಕ್ಕೆ ಡಿ.ಕೆ.ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದು ಸರಿ ಅಲ್ಲ. ನಮ್ಮದು ಭಾರತೀಯ ಸಂಸ್ಕೃತಿ, ಭಾರತೀಯ ಸಂಸ್ಕೃತಿ ಹಂಚಿ ತಿನ್ನುವುದಾಗಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಸೋನಿಯಾ ಗಾಂಧಿಯನ್ನು ಸಂತೃಪ್ತಿ ಪಡಿಸುವುದಷ್ಟೇ ಆಗಿದೆ. ಇವರಿಬ್ಬರಿಗೆ ಈ ಜನ್ಮದಲ್ಲಿ ಬುದ್ಧಿ ಬರಲ್ಲ ಎಂದರು.
ಇದು ಆಡಳಿತದ ಪ್ರಶ್ನೆ!
ಇಲಾಖೆಯ ಅನುದಾನದಲ್ಲಿ ನೀತಿ-ನಿಯಮ ಮತ್ತು ಪಾಲನೆಯ ಕುರಿತು ನಾನು ಸ್ಪಷ್ಟನೆ ಕೋರಿ ರಾಜ್ಯಪಾಲರಿಗೆ ಪತ್ರ ಬರೆದಿದ್ದೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಇದನ್ನು ಇಲ್ಲಿಗೆ ನಿಲ್ಲಿಸಿ ಎಂದು ಹೇಳಿದ ಮೇಲೆ ನಾನು ಸುಮ್ಮನಾಗಿದ್ದೇನೆ. ಇದು ಕೇವಲ ಯಡಿಯೂರಪ್ಪ ಹಾಗೂ ಈಶ್ವರಪ್ಪನವರ ಪ್ರಶ್ನೆ ಅಲ್ಲ. ಇದು ಆಡಳಿತದ ಪ್ರಶ್ನೆಯಾಗಿದೆ ಎಂದರು.
ಇದನ್ನೂ ಓದಿ:ಹೆಲಿಟೂರಿಸಂ: 'ಸೇವ್ ಮೈಸೂರು' ಅಭಿಯಾನಕ್ಕೆ ದುನಿಯಾ ವಿಜಯ್ ಸಾಥ್
ನಾನು ಪತ್ರ ಬರೆದಿದ್ದನ್ನೇ ಸಿದ್ದರಾಮಯ್ಯನವ್ರು ರಾಜಕೀಯಕ್ಕೆ ಬಳಸಿಕೊಂಡ್ರು. ಅವರು 9 ಸಲ ಬಜೆಟ್ ಮಂಡನೆ ಮಾಡಿದ್ದಾರೆ. ಸಿಎಂ ಆಗಿದ್ದವರು, ಅವರು ಇದು ಸರಿಯೋ ತಪ್ಪೋ ಎಂದು ಹೇಳಬಹುದಾಗಿತ್ತು. ಆದರೆ ಅದನ್ನು ಅವರು ಮಾಡಲಿಲ್ಲ. ಈಗಲೂ ಸಹ ಸಿದ್ದರಾಮಯ್ಯನವರು ಅವರ ಅಭಿಪ್ರಾಯ ತಿಳಿಸಬೇಕಿದೆ. ನನ್ನ ನಿಲುವಿಗೆ ಸಂಸದರು, ಶಾಸಕರು, ಮಠಾಧೀಶರು, ಸಂಘ ಸಂಸ್ಥೆಗಳು ಬೆಂಬಲ ನೀಡಿವೆ. ಇದು ಆಡಳಿತಾತ್ಮಕ ವಿಷಯವಾಗಿದೆ ಎಂದರು.