ಶಿವಮೊಗ್ಗ:ಹೆಚ್.ಡಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯಗೆ ಆರ್ಎಸ್ಎಸ್ ಬಗ್ಗೆ ಟೀಕೆ ಮಾಡಿಲ್ಲ ಎಂದರೆ ತಿಂದಿರುವ ಅನ್ನ ಕರಗುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ಆರ್ಎಸ್ಎಸ್ನಲ್ಲಿ ತರಬೇತಿ ತೆಗೆದುಕೊಂಡು ಐಎಎಸ್, ಐಪಿಎಸ್ನ ಅಧಿಕಾರಿಗಳು ಆಡಳಿತ ನಡೆಸುತ್ತಿದ್ದಾರೆ. ಇಡೀ ದೇಶದಲ್ಲಿ ಆರ್ಎಸ್ಎಸ್ನ ಆಡಳಿತವೇ ನಡೆಯುತ್ತಿದೆ ಎಂದು ಕುಮಾರಸ್ವಾಮಿ, ಸಿದ್ದರಾಮಯ್ಯ ಹೇಳುತ್ತಾರೆ.
ಹೌದು, ದೇಶದ ಎಲ್ಲ ಕಡೆಯಲ್ಲೂ ಆರ್ಎಸ್ಎಸ್ ಇದೆ. ರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲರು ಹಾಗೂ ನಾನು ಸಹ ಆರ್ಎಸ್ಎಸ್ನವನು. ಆದರೆ, ಇವರೇಕೆ ಉರಿದು ಬೀಳುತ್ತಾರೆ ಗೊತ್ತಿಲ್ಲ ಎಂದರು.
ಆರ್ಎಸ್ಎಸ್ ವಿದ್ಯಾಕ್ಷೇತ್ರದಲ್ಲಿ, ಆರೋಗ್ಯ ಕ್ಷೇತ್ರದಲ್ಲಿ ಹಾಗೂ ಎಲ್ಲಾ ಕ್ಷೇತ್ರದಲ್ಲೂ ಕೆಲಸ ಮಾಡುತ್ತಿದೆ. ದೇಶದ ಪ್ರತಿಹಳ್ಳಿಯಲ್ಲೂ ಸಂಘಟನೆ ಇದೆ. ಈ ಕುಮಾರಸ್ವಾಮಿ ಅವರಿಗೆ ಮೆದುಳಿನ ಮೇಲೆ ಪೂರೆ ಬಂದಿದೆ. ಅವರು ಪ್ರಾಮಾಣಿಕ ಕಣ್ಣಿಂದ ನೋಡಿದರೆ ರಾಷ್ಟ್ರಭಕ್ತಿ ನಿರ್ಮಾಣ ಮಾಡುತ್ತಿರುವ ಸಂಸ್ಥೆ ಎಂಬುದು ಗೊತ್ತಾಗುತ್ತೆ ಎಂದು ಟಾಂಗ್ ನೀಡಿದರು.
ಇವರಿಗೆಲ್ಲ ಈಗ ಭಯ ಶುರುವಾಗಿದೆ
ಇವರಿಗೆ ಇಡೀ ದೇಶದಲ್ಲಿ ಆರ್ಎಸ್ಎಸ್ ಬೆಳೆಯುತ್ತಿರುವುದರಿಂದ ನಮ್ಮ ಕಥೆ ಮುಗಿಯಿತು ಅಂತಾ ಭಯ ಹುಟ್ಟಿದೆ. ಹಾಗಾಗಿ, ಹೇಳುತ್ತಾರೆ. ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಈಗ ಎಲ್ಲಿದೆ?. ಮುಂದೆಯೂ ಹೀಗೆ ಆರ್ಎಸ್ಎಸ್ ಬಗ್ಗೆ ಆಪಾದನೆ ಮಾಡಿದರೆ ಕಾಂಗ್ರೆಸ್ ದೇಶದಲ್ಲಿಯೇ ನಿರ್ನಾಮ ಆಗುತ್ತೆ ಎಂದು ಭವಿಷ್ಯ ನುಡಿದರು.
ಉತ್ತರ ಪ್ರದೇಶದಲ್ಲಿ ಆ ರೀತಿ ಘಟನೆ ನಡೆಯಬಾರದಿತ್ತು. ಯಾರು ತಪ್ಪಿತಸ್ಥರಿದ್ದಾರೋ ಅವರ ಮೇಲೆ ಕ್ರಮ ತೆಗೆದುಕೊಳ್ಳಲೇಬೇಕು. ಆದರೆ, ಈ ಘಟನೆಯನ್ನ ಹಿಡಿದುಕೊಂಡು ರಾಜಕಾರಣ ಮಾಡಲು ಉಪಯೋಗಿಸುತ್ತಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ. ಕಾಂಗ್ರೆಸ್ ಪಕ್ಷ ಈ ಘಟನೆಯನ್ನು ದುರುಪಯೋಗ ಮಾಡುವ ಪ್ರಯತ್ನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು ಈಶ್ವರಪ್ಪ
ನಮ್ಮ ಪಕ್ಷ ಚುನಾವಣೆಗೆ ಸನ್ನದ್ಧವಾಗಿದೆ
ಎರಡು ಉಪ ಚುನಾವಣೆಗೆ ಭಾರತೀಯ ಜನತಾ ಪಾರ್ಟಿ ಈಗಾಗಲೇ ರೆಡಿ ಇದೆ. ಎರಡು ಕಡೆಯಲ್ಲೂ ನಾವು ಗೆಲ್ಲುತೇವೆ. ಈ ಕಾಂಗ್ರೆಸ್ ಪಕ್ಷದವರ ಪರಿಸ್ಥಿತಿ ಹೇಗಿದೆ ಎಂದರೆ ಹಿಂದೂಗಳು ನಮಗೆ ವೋಟ್ ಕೊಡಲ್ಲ, ಮುಸ್ಲಿಮರು ವೋಟ್ ಕೊಡುತ್ತಾರೆ. ಆದರೆ, ಬೇರೆ ಪಕ್ಷದಲ್ಲಿ ಮುಸ್ಲಿಮರು ನಿಂತು ಬಿಟ್ಟರೆ ಆವಾಗ ನಮಗೆ ವೋಟ್ ಕೊಡಲ್ಲ ಎನ್ನುವ ಗೊಂದಲದಲ್ಲಿದ್ದಾರೆ. ನಾವು ಹೆಮ್ಮೆಯಿಂದ ಹೇಳುತ್ತೇವೆ. ಹಿಂದೂಗಳು ನಮಗೆ ವೋಟ್ ಕೊಟ್ಟು ಎರಡು ಕಡೆ ಗೆಲ್ಲಿಸುತ್ತಾರೆ ಎಂದರು.
ಓದಿ:ಕುಮಾರಸ್ವಾಮಿಗೆ ಬುದ್ಧಿ ಭ್ರಮಣೆಯಾಗಿದೆ: ರೇಣುಕಾಚಾರ್ಯ ವಾಗ್ದಾಳಿ