ಶಿವಮೊಗ್ಗ:ನಪುಂಸಕ ಸಂಘಟನೆಯ ನಾಯಕ ಸಿದ್ದರಾಮಯ್ಯ ಎಂದು ಮಾಜಿ ಸಚಿವ ಕೆ. ಎಸ್ ಈಶ್ವರಪ್ಪ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷ ನಾಯಕ ಎಂಬುದನ್ನು ಮರೆತು ಸಿದ್ದರಾಮಯ್ಯ ಅವರು ಆರ್ಎಸ್ಎಸ್ ಅನ್ನು ನಪುಂಸಕ ಸಂಘ ಎಂದು ಕರೆದಿದ್ದಾರೆ. ನಪುಂಸಕರಿಗೆ ಮಾತ್ರ ನಪುಂಸಕ ಎಂದರೆ ಏನು ಎಂಬುದು ಗೊತ್ತು. ಅದಕ್ಕಾಗಿ ಕಾಂಗ್ರೆಸ್ ನಪುಂಸಕವಾಗಿದೆ. ಆರ್ ಎಸ್ ಎಸ್ ಹುಲಿ ಸಿಂಹಗಳಂತ ದೇಶ ಭಕ್ತರನ್ನು ತಯಾರಿಸುವ ಸಂಘಟನೆ ಎಂದರು.
ಸಿದ್ದರಾಮಯ್ಯ ಅವರು ನನಗೆ ಮೆದುಳು- ನಾಲಿಗೆಗೆ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ನಾನು ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ಕರೆದಾಗ ನನ್ನನ್ನು ಪ್ರಾಣಿ ಎನ್ನುತ್ತಾರೆ. ಸಿದ್ದರಾಮಯ್ಯ ಅವರು ಮೋದಿ, ಯಡಿಯೂರಪ್ಪ ಅವರನ್ನು ಏಕ ವಚನದಲ್ಲಿ ಬೈದಿದ್ದರು. ಈಗ ಹೇಳಲಿ ಸಿದ್ದರಾಮಯ್ಯ ಅವರು ಯಾವಾಗ ಪ್ರಾಣಿಯಾದರು ಎಂದು. ಸಿಂಹದಮರಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ತೋರಿಸಿದ್ದಾರೆ. ನಪುಂಸಕರಾದ ಕಾಂಗ್ರೆಸ್ಸಿಗರು 75 ವರ್ಷ ಅಧಿಕಾರ ನಡೆಸಿದರೂ ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ತೋರಿಸಲಿಲ್ಲ. ಸಿದ್ದರಾಮಯ್ಯ ಅವರನ್ನು ಪ್ರಾಣಿಗೆ ಹೋಲಿಸಿದರೆ ಆ ಪ್ರಾಣಿಗೆ ಅವಮಾನ ಮಾಡಿದಂತೆ. 1925 ರ ವಿಜಯದಶಮಿ ದಿನ ಆರ್ ಎಸ್ ಎಸ್ ಹುಟ್ಟಿದ್ದು. ದೇಶದೊಳಗೆ ಬ್ರಿಟಿಷರು ಆರು ನೂರು ವರ್ಷದ ಹಿಂದೆ ಬರಲು ಆರ್ ಎಸ್ ಎಸ್ ಕಾರಣ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದನ್ನು ನೋಡಿದರೆ ಸಿದ್ದರಾಮಯ್ಯ ಅವರ ತಲೆಯಲ್ಲಿ ಸಗಣಿ ಬಿಟ್ಟರೆ ಏನೂ ಇಲ್ಲ ಎಂಬುದು ತಿಳಿಯುತ್ತದೆ ಎಂದು ವಾಗ್ದಾಳಿ ನಡೆಸಿದರು.
ಆರ್ ಎಸ್ ಎಸ್ ಸಿಂಹ, ಹುಲಿ ಮರಿಗಳಿರುವ ಸಂಘಟನೆ. ಈಗ ಆರ್ಎಸ್ಎಸ್ ನವರು ತಡೆದುಕೊಳ್ಳುವ ಸ್ಥಿತಿಯಲಿಲ್ಲ. ನಾವಾಗಿ ಯಾರನ್ನೂ ಹೊಡೆಯಲು ಹೋಗುವುದಿಲ್ಲ. ಯಾರಾದರೂ ನಮಗೆ ಹೊಡೆದರೆ ಅವರು ಯಾವುದರಲ್ಲಿ ಹೊಡೆದರೋ ಅದರಲ್ಲೇ ತಿರುಗಿಸಿ ಹೊಡೆಯುತ್ತೇವೆ. ಸಿದ್ದರಾಮಯ್ಯ ಅವರು ಕೋರ್ಟ್ ತೀರ್ಪನ್ನು ಸ್ವಾಗತಿಸಬೇಕಿತ್ತು. ಆದರೆ ಅವರು ದೇಶದ್ರೋಹಿ ಓವೈಸಿ ಜೊತೆ ಕೈ ಜೋಡಿಸಿದ್ದಾರೆ. ಖರ್ಗೆ ಮತ್ತು ಸಿದ್ದರಾಮಯ್ಯ ಯಾವ ಪ್ರಾಣಿ ಹಾಗೂ ಯಾವ ಸಂತತಿ ಎಂದು ನೀವೇ ಹೇಳಿ ಎಂದರು.
ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಏಕವಚನದಲ್ಲಿ ನಿಂದಿಸುತ್ತಾರೆ. ಖರ್ಗೆ ಅವರು ಹೆಡ್ಗೆವಾರ್ ಅವರನ್ನು ಏಕ ವಚನದಲ್ಲಿ ನಿಂದಿಸುತ್ತಾರೆ. ಇವರು ಯಾವ ಪ್ರಾಣಿ ಎಂದು ಸ್ಪಷ್ಟಪಡಿಸಲಿ. ಕಾಂಗ್ರೆಸ್ ವಿದೇಶಿ ವ್ಯಕ್ತಿಗಳ ಕೈಯಲ್ಲಿ ಸಿಲುಕಿಕೊಂಡಿದೆ. ಸೋನಿಯಾ ಗಾಂಧಿ ಭಾರತೀಯರಾ? ಎಂಬುದನ್ನು ಕಾಂಗ್ರೆಸ್ಸಿಗರು ಸ್ಪಷ್ಟಪಡಿಸಲಿ ಎಂದು ಈಶ್ವರಪ್ಪ ಒತ್ತಾಯಿಸಿದರು.