ಶಿವಮೊಗ್ಗ: ಇದೇ ತಿಂಗಳ 24 ಮತ್ತು 25 ರಂದು ನಗರದಲ್ಲಿ ಬೃಹತ್ ಉದ್ಯೋಗ ಮೇಳವನ್ನು ರಾಜ್ಯ ಸರ್ಕಾರ ಆಯೋಜಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಉದ್ಯೋಗ ಮೇಳದ ವೆಬ್ಸೈಟ್ ಉದ್ಘಾಟಿಸಿ ಮಾತನಾಡಿದ ಅವರು, ಶಿವಮೊಗ್ಗದ ಬಾಪೂಜಿ ನಗರದ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಯುವಕರಿಗೆ ಸಚಿವ ಈಶ್ವರಪ್ಪ ಕರೆ ನೀಡಿದ್ರು. ಈ ಮೇಳದಲ್ಲಿ ವಿವಿಧ ಕ್ಷೇತ್ರದ 120 ಕ್ಕೂ ಹೆಚ್ಚು ಕಂಪನಿಗಳು ಭಾಗಿಯಾಗಲಿವೆ. ಉತ್ಪಾದನಾ ವಲಯ ಮತ್ತು ಆಟೋಮೊಬೈಲ್ ಕ್ಷೇತ್ರದ ಕಂಪನಿಗಳನ್ನು ಆಹ್ವಾನಿಸಲಾಗಿದೆ. ಮೇಳದಲ್ಲಿ ನೇರ ಸಂದರ್ಶನ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಎಸ್ಎಸ್ಎಲ್ಸಿ, ಪಿಯುಸಿ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವೀಧರರು 18 ರಿಂದ 40 ವರ್ಷದ ಒಳಗಿನವರು ಭಾಗವಹಿಸಬಹುದು ಎಂದರು.