ಕರ್ನಾಟಕ

karnataka

ETV Bharat / state

ಇಂದು ಶಿವಮೊಗ್ಗದಲ್ಲಿ ಉದ್ಯೋಗ ಮೇಳ: 60ಕ್ಕೂ ಹೆಚ್ಚು ಕಂಪನಿಗಳು ಭಾಗಿಯಾಗುವ ಸಾಧ್ಯತೆ - ಶಿವಮೊಗ್ಗದಲ್ಲಿ ಉದ್ಯೋಗ ಮೇಳ

Job fair in Shivamogga: 10ನೇ ತರಗತಿಯಿಂದ ಸ್ನಾತಕೋತ್ತರ ಶಿಕ್ಷಣ ಪಡೆದವರು ಈ ಉದ್ಯೋಗ ಮೇಳದಲ್ಲಿ ಭಾಗಿಯಾಗಬಹುದು.

ಶಿವಮೊಗ್ಗದಲ್ಲಿ ಉದ್ಯೋಗ ಮೇಳ
ಶಿವಮೊಗ್ಗದಲ್ಲಿ ಉದ್ಯೋಗ ಮೇಳ

By ETV Bharat Karnataka Team

Published : Nov 8, 2023, 7:08 AM IST

ಶಿವಮೊಗ್ಗ:ಶಿವಮೊಗ್ಗ ನಗರದ ಸೈನ್ಸ್ ಮೈದಾನದಲ್ಲಿ ಇಂದು ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ, ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗು ಮಹಾನಗರ ಪಾಲಿಕೆಗಳ ಸಂಯುಕ್ತ ಆಶ್ರಯದಲ್ಲಿ ಬೃಹತ್ ಉದ್ಯೋಗ ಮೇಳ ನಡೆಯಲಿದೆ.

ಮೇಳವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ವೈದ್ಯಕೀಯ ಹಾಗೂ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖಾ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್ ಹಾಗೂ ಯೋಜನೆ ಮತ್ತು ಸಾಂಖ್ಯಿಕ ಇಲಾಖಾ ಸಚಿವರಾದ ಡಿ.ಸುಧಾಕರ್, ಅಧ್ಯಕ್ಷತೆಯನ್ನು ಶಿವಮೊಗ್ಗ ನಗರ ಶಾಸಕ ಎಸ್.ಎನ್ ಚನ್ನಬಸಪ್ಪ ವಹಿಸಲಿದ್ದಾರೆ.

60ಕ್ಕೂ ಹೆಚ್ಚು ಕಂಪನಿಗಳು ಭಾಗಿ ಸಾಧ್ಯತೆ:ಉದ್ಯೋಗ ಮೇಳದಲ್ಲಿ 60ಕ್ಕೂ ಹೆಚ್ಚು ಕಂಪನಿಗಳು ಭಾಗಿಯಾಗಲಿವೆ. 10ನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗಿನ ವಿದ್ಯಾರ್ಥಿಗಳು ಭಾಗಿಯಾಗಬಹುದು. ಇದುವರೆಗೆ ಸುಮಾರು ಒಂದೂವರೆ ಸಾವಿರ ಉದ್ಯೋಗಾಕಾಂಕ್ಷಿಗಳು ನೋಂದಣಿ ಮಾಡಿಕೊಂಡಿದ್ದಾರೆ.

ಬೆಳಿಗ್ಗೆ 10:30 ರಿಂದ ಸಂಜೆ 6 ಗಂಟೆಯ ತನಕ ಉದ್ಯೋಗ ಮೇಳ ನಡೆಯಲಿದೆ. ತರಬೇತಿ ಅವಶ್ಯಕತೆ ಇರುವವರಿಗೆ ಕಂಪನಿಗಳೇ ತರಬೇತಿ ನೀಡಿ ಉದ್ಯೋಗ ನೀಡಲಿವೆ. ಮೇಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಅವಶ್ಯಕತೆ ಇದ್ದರೆ ಸಂಜೆ ಆರು ಗಂಟೆಯ ನಂತರವು ಮೇಳ ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಸೇಡಂನಲ್ಲಿ ಉದೋಗ್ಯ ಮೇಳ: ಇತ್ತೀಚೆಗೆ ಕಲಬುರಗಿ ಜಿಲ್ಲೆಯಸೇಡಂ ಪಟ್ಟಣದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆ ಹಾಗೂ ಕಲಬುರಗಿ ಜಿಲ್ಲಾಡಳಿತ ಉದ್ಯೋಗ ಮೇಳ ಆಯೋಜಿಸಿತ್ತು. ಆಕಾಂಕ್ಷಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಸುಮಾರು 457 ಜನರಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರ ನೀಡಲಾಗಿತ್ತು. ಇನ್ನುಳಿದ 1,350 ಜನರು ಮುಂದಿನ ಹಂತದ ಸಂದರ್ಶನಕ್ಕೆ ಆಯ್ಕೆಯಾಗಿದ್ದರು.

ಸಚಿವ ಡಾ.ಶರಣಪ್ರಕಾಶ ಪಾಟೀಲ ಉದ್ಯೋಗ ಪಡೆದ ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರ ನೀಡಿ ಶುಭ ಕೋರಿದ್ದರು. ನಿರುದ್ಯೋಗ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಮುಂದಿನ ಐದು ವರ್ಷದಲ್ಲಿ ನಮ್ಮ ಸರ್ಕಾರವು ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ 50 ಸಾವಿರ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದರು.

ಪ್ರಮುಖವಾಗಿ ಉದ್ಯೋಗ ಮೇಳದಲ್ಲಿ ಎಲ್ ಆ್ಯಂಡ್ ಟಿ ಫೈನಾನ್ಸ್, ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್, ಜೆ.ಎಸ್.ಡಬ್ಲ್ಯೂ ಸ್ಟೀಲ್ ಲಿಮಿಟೆಡ್, ಟ್ರೇಡೆಂಟ್ ಆಟೋಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್, ಆದಿತ್ಯ ಬಿರ್ಲಾ ಸನ್‍ಲೈಫ್ ಇನ್ಸುರೆನ್ಸ್ ಕಂಪನಿ, ಕೆ.ಬಿ.ಎಲ್ ಸರ್ವಿಸಸ್ ಲಿಮಿಟೆಡ್, ಎಲ್‍ಐಸಿ ಆಫ್ ಇಂಡಿಯಾ, ಮಹೇಂದ್ರ ಆ್ಯಂಡ್ ಮಹೇಂದ್ರಾ ಎ.ಡಿ.ಜಹೀರಾಬಾದ್, ಅಲ್ಟಾಟೆಕ್ ಸಿಮೆಂಟ್ ಲಿಮಿಟೆಡ್, ಸೇಡಂ ತಾಲೂಕಿನ ಕೋಡ್ಲಾದ ಶ್ರೀ ಸಿಮೆಂಟ್ ಹಾಗೂ ಲೇಬರ್ನೆಟ್ ಸರ್ವಿಸಸ್ ಪ್ರೈವೆಟ್ ಲಿಮಿಟೆಡ್ ಸೇರಿದಂತೆ 110ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದವು.

ಇದನ್ನೂ ಓದಿ:ಅಕ್ಟೋಬರ್​ 6, 7ಕ್ಕೆ ಬೃಹತ್ ಉದ್ಯೋಗ ಮೇಳ, 200ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುವ ನಿರೀಕ್ಷೆ: ಪ್ರಸಾದ್ ಶೆಟ್ಟಿ

ABOUT THE AUTHOR

...view details