ಕರ್ನಾಟಕ

karnataka

ETV Bharat / state

ರಾಜ್ಯ ಸರ್ಕಾರ ಪೊಲೀಸರು , ಅಬಕಾರಿ ಇಲಾಖೆಯಿಂದ ಹಣ ವಸೂಲಿ ಮಾಡಿಸುತ್ತಿದೆ: ಕೆ ಬಿ ಪ್ರಸನ್ನ ಕುಮಾರ್ ಆರೋಪ - etv bharat kannada

ರಾಜ್ಯ ಸರ್ಕಾರ ಒಂದು ಮನೆಗೆ 2 ಸಾವಿರ‌ ಕೊಟ್ಟು, 6 ಸಾವಿರ ವಸೂಲಿ‌ ಮಾಡುತ್ತಿದೆ ಎಂದು ಜೆಡಿಎಸ್ ಕೋರ್ ಕಮಿಟಿ ಸದಸ್ಯ ಕೆ ಬಿ ಪ್ರಸನ್ನ ಕುಮಾರ್ ಟೀಕಿಸಿದ್ದಾರೆ.

Etv Bharatjds-core-committee-member-kb-prasanna-kumar-reaction-on-congress-governmnet
ರಾಜ್ಯ ಸರ್ಕಾರ ಪೊಲೀಸರು ಮತ್ತು ಅಬಕಾರಿ ಇಲಾಖೆಯಿಂದ ಹಣ ವಸೂಲಿ ಮಾಡಿಸುತ್ತಿದೆ: ಕೆ ಬಿ ಪ್ರಸನ್ನ ಕುಮಾರ್

By ETV Bharat Karnataka Team

Published : Nov 20, 2023, 3:36 PM IST

Updated : Nov 20, 2023, 3:46 PM IST

ಕೆ ಬಿ ಪ್ರಸನ್ನ ಕುಮಾರ್ ಪ್ರತಿಕ್ರಿಯೆ

ಶಿವಮೊಗ್ಗ: "ರಾಜ್ಯದಲ್ಲಿ‌ ಒಂದು ಕಡೆ ಬರ ಆವರಿಸಿದೆ, ಮತ್ತೊಂದು ಕಡೆ ಗ್ಯಾರಂಟಿಗಳಿಗೆ ಹಣ ಹೊಂದಿಸಲು ರಾಜ್ಯ ಸರ್ಕಾರ ಪೊಲೀಸರನ್ನು ರೌಡಿಗಳಂತೆ ರಸ್ತೆಯಲ್ಲಿ ಬಿಟ್ಟು ಹಣ ವಸೂಲಿ ಮಾಡಿಸುತ್ತಿದ್ದಾರೆ" ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ಕೋರ್ ಕಮಿಟಿ ಸದಸ್ಯ ಕೆ ಬಿ ಪ್ರಸನ್ನ ಕುಮಾರ್ ಆರೋಪಿಸಿದರು. ಶಿವಮೊಗ್ಗ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ರಾಜ್ಯ ಸರ್ಕಾರ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಟ್ರಾಫಿಕ್ ಪೊಲೀಸರಿಂದ ವಸೂಲಿ ಮಾಡಿಸುತ್ತಿದೆ" ಎಂದರು.

"ಹಿಂದೆ ಯಾವತ್ತೂ ಗಲ್ಲಿ ಗಲ್ಲಿಗಳಲ್ಲಿ, ಕೇರಿ- ಕೇರಿಗಳಲ್ಲಿ ಪೊಲೀಸರು ವಾಹನಗಳನ್ನು ಹಿಡಿದುಕೊಂಡು ನಿಂತಿರುವುದನ್ನು ನಾವು ನೋಡಿರಲಿಲ್ಲ. ಟ್ರಾಫಿಕ್​ ವ್ಯವಸ್ಥೆಯನ್ನು ಸರಿ ಮಾಡಲು ಪೊಲೀಸರು ಇರುವುದು ಎಂದು ಒಪ್ಪುತ್ತೇವೆ. ಅದಕ್ಕೆ ಸಹಕಾರ ಕೊಡುತ್ತೇವೆ. ಆದರೆ, ಈಗ ಪೊಲೀಸರು ಹಗಲು ದರೋಡೆಗೆ ಇಳಿದಿದ್ದಾರೆ. ಹಿಂದೆ ಪೊಲೀಸರು ಟ್ರಾಫಿಕ್​ ರೂಲ್ಸ್​ ಬ್ರೇಕ್ ಮಾಡಿದ್ದರೆ, ಕನಿಷ್ಠ 500 ರೂ ದಂಡ ಹಾಕುತ್ತಿದ್ದರು. ಆದರೆ ಈಗ 3 ರಿಂದ 4 ಸಾವಿರ ರೂ ದಂಡ ವಸೂಲಿ ಮಾಡಲಾಗುತ್ತಿದೆ. ಒಂದು ಮನೆಗೆ 2 ಸಾವಿರ‌ ಕೊಟ್ಟು, 6 ಸಾವಿರ ವಸೂಲಿ‌ ಮಾಡುತ್ತಿದ್ದಾರೆ" ಎಂದು ಟೀಕಿಸಿದರು.

"ಒಂದು ಕಡೆ ಪೊಲೀಸರಿಂದ ಮತ್ತೊಂದು ಕಡೆ ಅಬಕಾರಿಯಿಂದ ವಸೂಲಿ ಮಾಡಲಾಗುತ್ತಿದೆ, ಆದರೆ ಗ್ಯಾರಂಟಿಗಳು ಮಾತ್ರ ಎಲ್ಲರಿಗೂ ಸಿಗುವಂತಹ ವ್ಯವಸ್ಥೆ ಇನ್ನೂ ಆಗಿಲ್ಲ. ರಾಜ್ಯ ಸರ್ಕಾರ ಬಲಗೈಯಲ್ಲಿ ಕೊಟ್ಟು ಎಡಗೈಯಲ್ಲಿ ಡಬಲ್​ ಕಿತ್ತುಕೊಳ್ಳುತ್ತಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿರುವ ವಾತಾವರಣ ಕೇವಲ ಐದಾರು ತಿಂಗಳಲ್ಲೇ ಬಂದಿದೆ" ಎಂದರು.

ಕಾಂಗ್ರೆಸ್ ಭಯದಿಂದ ಆಪರೇಷನ್ ಹಸ್ತ ಮಾಡುತ್ತಿದೆ: "ಕಾಂಗ್ರೆಸ್ ಇಷ್ಟೊಂದು ಬಹುಮತ ಹೊಂದಿ ಮತ್ತೆ ಯಾಕೆ ಬೇರೆ ಬೇರೆ ಪಕ್ಷದವರನ್ನು ಸೆಳೆಯುತ್ತಿದೆ ಎಂದು ಗೂತ್ತಿಲ್ಲ. ಮುಂದಿನ ಚುನಾವಣೆಯ ಭಯದಿಂದ ಅವರು ಆಪರೇಷನ್ ಹಸ್ತ ಮಾಡುತ್ತಿದ್ದಾರೆ. ಆಪರೇಷನ್ ಹಸ್ತ ಮಾಡಿ ಕೆಲವು ಕಡೆ ವಿಫಲವಾಗುತ್ತಿದ್ದಾರೆ. ಚುನಾವಣೆ ಎದುರಿಸಲು ಧೈರ್ಯ ಸಾಕಾಗುತ್ತಿಲ್ಲ. ಕಾಂಗ್ರೆಸ್ ಇಷ್ಟೆಲ್ಲ ಗ್ಯಾರಂಟಿಗಳನ್ನು ಕೊಟ್ಟು ಹೇಗೆ ನಿರ್ವಹಣೆ ಮಾಡುವುದು ಎಂದು ಗೂತ್ತಾಗುತ್ತಿಲ್ಲ. ಇದರಿಂದ ಹೆದರಿಕೆ ಪ್ರಾರಂಭವಾಗಿ ನೀನು ಬಾ ಎಂದು ಕರೆಯಲು ಪ್ರಾರಂಭಿಸಿದ್ದಾರೆ. ಕಾಂಗ್ರೆಸ್ ನಂಬಿ ಜನ ಸೂಪರ್ ಮೆಜಾರಿಟಿ ಕೊಟ್ಟಿದ್ದಾರೆ. ಆದರೂ ಸಹ ಆಪರೇಷನ್ ಹಸ್ತ ನಡೆಸುತ್ತಿದ್ದಾರೆ" ಎಂದು ಲೇವಡಿ ಮಾಡಿದರು.

ಇದನ್ನೂ ಓದಿ:ನಮ್ಮ ಯೋಜನೆ ವಿರೋಧಿಸಿದವರೇ ಈಗ ಗ್ಯಾರಂಟಿ ಹಿಂದೆ ಬಿದ್ದಿದ್ದಾರೆ: ಸಿಎಂ ಸಿದ್ದರಾಮಯ್ಯ

Last Updated : Nov 20, 2023, 3:46 PM IST

ABOUT THE AUTHOR

...view details