ಜಮೀರ್ ಅಹ್ಮದ್ಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ: ಸಾಗರದಲ್ಲಿ ಜಮೀರ್ ಅಭಿಮಾನಿಗಳಿಂದ ಪ್ರತಿಭಟನೆ ಶಿವಮೊಗ್ಗ: ರಾಜ್ಯದ ಅಲ್ಪಸಂಖ್ಯಾತರ ನಾಯಕ ಶಾಸಕ ಜಮೀರ್ ಅಹ್ಮದ್ ಖಾನ್ಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಆಗ್ರಹಿಸಿ ಸಾಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಸಾಗರದ ಜಮೀರ್ ಅಹ್ಮದ್ ಖಾನ್ ಅವರ ಅಭಿಮಾನಿಗಳ ಸಂಘದ ವತಿಯಿಂದ ಸಾಗರದ ಶಿವಪ್ಪನಾಯಕ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ಈ ವೇಳೆ ಜಮೀರ್ ಅಹ್ಮದ್ ಖಾನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸೈಯದ್ ಜಮೀಲ್ ಮಾತನಾಡಿ, ಕೋಮುವಾದವನ್ನು ಸೃಷ್ಟಿಸಿದ್ದ, ಹಿಂದೂ ಮತ್ತು ಮುಸ್ಲಿಮರಲ್ಲಿ ವಿಷ ಬೀಜ ಬಿತ್ತಿ ದುರಾಡಳಿತ ನಡೆಸಿದ್ದ ಬಿಜೆಪಿ ಸರ್ಕಾರವನ್ನು ಕರ್ನಾಟಕದ ಮಹಾಜನತೆ ಕಿತ್ತೊಗೆದಿದ್ದಾರೆ. ಅವರಿಗೆ ಧನ್ಯವಾದಗಳು. ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತವನ್ನು ಕೊಟ್ಟಿದ್ದಾರೆ. ಇದರಲ್ಲಿ ಅಲ್ಪಸಂಖ್ಯಾತರ ಶೇ 85 ರಷ್ಟು ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದಾರೆ ಎಂದರು.
ಅಲ್ಪಸಂಖ್ಯಾತರ ಜನಪ್ರಿಯ ನಾಯಕರಾದ ಜಮೀರ್ ಅಹ್ಮದ್ ಖಾನ್ ಕೇವಲ ಮುಸ್ಲಿಮರಿಗಷ್ಟೇ ಅಲ್ಲದೇ ಸರ್ವಜನಾಂಗದ ನಾಯಕರು, ಇಡೀ ರಾಜ್ಯದ ಎಲ್ಲಾ ಜಾತಿ ಧರ್ಮದವರನ್ನು ಜಮೀರ್ ಅಹ್ಮದ್ ಖಾನ್ ತಲುಪಿದ್ದಾರೆ. ಇತಿಹಾಸದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರನ್ನು ಕಾಂಗ್ರೆಸ್ ಪಕ್ಷ ಇದುವರೆಗೂ ಮಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಮಾಡಿಲ್ಲ. ಆದರಿಂದ ಜಮೀರ್ ಅಹ್ಮದ್ ಖಾನ್ರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕು ಮತ್ತು ಸಚಿವ ಸಂಪುಟದಲ್ಲಿ ಪ್ರಮುಖ ಖಾತೆಯನ್ನು ಕೊಡಬೇಕು ಎಂದು ಕೇಂದ್ರ ಮತ್ತು ರಾಜ್ಯ ಕಾಂಗ್ರೆಸ್ ನಾಯಕರಿಗೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಾಗರದ ಜಮೀರ್ ಅಹ್ಮದ್ ಖಾನ್ ಸಂಘದ ಮುಖಂಡರಾದ ಗಾಂಧಿ ನಗರದ ಮನ್ಸೂರ್, ರಶೀದ್ , ಮೊಹಮ್ಮದ್ ಆರೀಫ್ ಭಾಗವಹಿಸಿದ್ದರು.
ಇದನ್ನೂ ಓದಿ:ಡಿಕೆಶಿಯೇ ಸಿಎಂ ಆಗಬೇಕೆಂಬ ಒತ್ತಾಯ .. ಸಭೆ ಕರೆದ ಒಕ್ಕಲಿಗ ಮಠಾಧೀಶರು