ಕರ್ನಾಟಕ

karnataka

ETV Bharat / state

ಈ ರೀತಿ ಕಗ್ಗೊಲೆಯಿಂದ ದೇಶದ ಮೂಲ ನಿವಾಸಿಗಳಾದ ಜೈನ ಮುನಿಗಳಿಗೆ ಜೀವ ಭಯ ಶುರು: ವೃಷಭಸೇನ ಭಟ್ಟಾರಕ ಸ್ವಾಮೀಜಿ - ಈಟಿವಿ ಭಾರತ್​ ಕನ್ನಡ ನ್ಯೂಸ್

ಕಾಮ‌ಕುಮಾರ ನಂದಿ ಮಹಾರಾಜರ ಹತ್ಯೆ ಹಿನ್ನೆಲೆ ವೃಷಭಸೇನ ಭಟ್ಟಾರಕ ಸ್ವಾಮೀಜಿ ಆತಂಕ ಹೊರಹಾಕಿದ್ದಾರೆ.

ವೃಷಭಸೇನ ಭಟ್ಟಾರಕ ಸ್ವಾಮೀಜಿ
ವೃಷಭಸೇನ ಭಟ್ಟಾರಕ ಸ್ವಾಮೀಜಿ

By

Published : Jul 9, 2023, 4:34 PM IST

Updated : Jul 9, 2023, 5:39 PM IST

ಕಾಮ‌ಕುಮಾರ ನಂದಿ ಮಹಾರಾಜರ ಹತ್ಯೆಗೆ ವಿಷಾಧ ವ್ಯಕ್ತಪಡಿಸಿದ ಶ್ರೀ ವೃಷಭಸೇನ ಭಟ್ಟಾರಕ ಸ್ವಾಮೀಜಿ

ಶಿವಮೊಗ್ಗ :ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತದಲ್ಲಿ ಜೈನ ಮಂದಿರದ ಮುನಿ ಆಚಾರ್ಯ ಶ್ರೀ 108 ಕಾಮ‌ಕುಮಾರ ನಂದಿ ಮಹಾರಾಜರ ಹತ್ಯೆ ಅತ್ಯಂತ ದುಃಖದ ಹಾಗೂ ಖಂಡನೀಯ ವಿಷಯ ಎಂದು ಲಕ್ಕವಳ್ಳಿಯ ಮೋಕ್ಷ ಮಂದಿರ ಜೈನ ಮಠದ ಶ್ರೀ ವೃಷಭಸೇನ ಭಟ್ಟಾರಕ ಸ್ವಾಮೀಜಿ ಹೇಳಿದರು.

ಸೊರಬ ತಾಲೂಕಿನ ಲಕ್ಕವಳ್ಳಿಯ ಶ್ರೀ ಮಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶ್ರೀ ಕುಮಾರನಂದಿ ಮಹಾರಾಜರನ್ನು ತೀವ್ರ ಹಿಂಸಾತ್ಮಕವಾಗಿ ಹತ್ಯೆ ಮಾಡಲಾಗಿದೆ. ಜಗತ್ತಿಗೆ ಶಾಂತಿ ಮತ್ತು ಅಹಿಂಸೆಯನ್ನು ಬೋಧಿಸಿದ ಜೈನ ಸಮಾಜದ ಮುನಿಗಳನ್ನು ಅಮಾನುಷವಾಗಿ ಕೊಲೆ ಮಾಡಿರುವುದು ಘೋರ ಅಪರಾಧವಾಗಿದೆ. ಹಾಗು ಈ ದೇಶದ ಮೂಲನಿವಾಸಿಗಳಾದ ನಾವು ಅಲ್ಪಸಂಖ್ಯಾಂತರಾಗಿದ್ದೇವೆ. ಹೀಗಾಗಿ ರಾಜ್ಯದಲ್ಲಿ ಮತ್ತು ದೇಶದಲ್ಲಿ ಜೈನ ಮುನಿಗಳ ಕಗ್ಗೊಲೆಗಳು ನಡೆಯುತ್ತಿರುವುದು ಜೀವ ಭಯ ತಂದಿದೆ ಎಂದು ಆತಂಕ ವ್ಯಕ್ತಪಡಿಸಿ, ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಶ್ರೀಗಳ ಹತ್ಯೆ ಘಟನೆಯಿಂದ ಅಲ್ಪಸಂಖ್ಯಾತರ ಜೈನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಆಧ್ಯಾತ್ಮ ಪ್ರವರ್ತಕರು, ಶಾಂತಿ ಪ್ರಿಯರು ಮತ್ತು ಅಹಿಂಸಾ ಪ್ರತಿಪಾದಕರಾದ ಜೈನ ಮುನಿಗಳಿಗೆ ಅಹಿತಕರ ಘಟನೆಗಳಿಂದ ತೊಂದರೆಯಾಗದಂತೆ ಭದ್ರತಾ ಕ್ರಮ ಕೈಗೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಜೈನ ಮುನಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕು. ಇಂತಹ ಘಟನೆ ಮರುಕಳಿಸದಂತೆ ಕ್ರಮ ವಹಿಸಬೇಕು ಎಂದು ಸ್ವಾಮೀಜಿ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸುರೇಶ್ ವೀರಾಪುರ, ಸೋಮಪ್ಪ ಜೈನರ್ ತಲಗಡ್ಡೆ ಸೇರಿದಂತೆ ಇತರರಿದ್ದರು.

ಜೈನ ಮುನಿ ಹತ್ಯೆ ಮಾನವ ಸಮಾಜ ತಲೆತಗ್ಗಿಸುವಂತಾಗಿದೆ- ಲಕ್ಷ್ಮಣ್​ ಸವದಿ

ಜೈನ ಮುನಿ ಹತ್ಯೆ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ:ಆಚಾರ್ಯ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಆಗಿದ್ದು, ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ ಇದಾಗಿದೆ ಎಂದು ಶಾಸಕ ಲಕ್ಷ್ಮಣ್ ಸವದಿ ತೀವ್ರವಾಗಿ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ಶ್ರೀಗಳ ಅಂತ್ಯಕ್ರಿಯೆಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ರೀತಿ ಹೀನ ಕೃತ್ಯವನ್ನು ಅತ್ಯಂತ ತೀವ್ರ ಗತಿಯಲ್ಲಿ ಖಂಡಿಸುತ್ತೇವೆ.

ಇಂತಹ ಘಟನೆ ನಮ್ಮ ರಾಜ್ಯ, ನಮ್ಮ ಜಿಲ್ಲೆಯಲ್ಲಿ ಆಗಿರೋದು ನಾವೆಲ್ಲರೂ ತಲೆ ತಗ್ಗಿಸುವಂತದ್ದು. ಜಿಲ್ಲೆಯ ಶಾಸಕರು, ಸಮಾಜ, ಸರ್ಕಾರ ಇದನ್ನು ಉಗ್ರವಾಗಿ ಖಂಡಿಸುತ್ತೇವೆ. ನಾಳೆ ನಡೆಯಲಿರುವ ಅಧಿವೇಶನದಲ್ಲಿ ಈ ಬಗ್ಗೆ ಸವಿಸ್ತಾರವಾಗಿ ಚರ್ಚೆ ಮಾಡುತ್ತೇವೆ. ಗೃಹ ಸಚಿವರು, ಸಿಎಂಗೆ ಕೂಲಂಕಷವಾಗಿ ತನಿಖೆ ನಡೆಸುವಂತೆ ಸರ್ಕಾರದ ಗಮನಕ್ಕೆ ತರುತ್ತೇವೆ. ಈ ಕೃತ್ಯ ಎಸಗಿದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಕಠಿಣ ಶಿಕ್ಷೆ ಆಗೋವರೆಗೂ ನಮ್ಮ ಅಧಿಕಾರಿಗಳು ಶ್ರಮಿಸುತ್ತಾರೆ ಎಂದು ಹೇಳಿದರು.

ಈಗಾಗಲೇ ಪೊಲೀಸ್ ಅಧಿಕಾರಿಗಳು ತೀವ್ರಗತಿಯಲ್ಲಿ ಆರೋಪಿಗಳನ್ನು ಬಂಧಿಸಿದ್ದು, ಕಾನೂನು ಚೌಕಟ್ಟಿನಲ್ಲಿ ಶಿಕ್ಷೆ ಕೊಡಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇಡೀ ಮನುಕುಲವೇ ಬೆಚ್ಚಿಬೀಳಿಸುವ ದುರ್ಘಟನೆ ಇದು ವಿಶ್ವಕ್ಕೆ ಶಾಂತಿಕೋರುವ ಅಹಿಂಸೆ ಪ್ರತಿಪಾದನೆ ಮಾಡುವವರು ಅಥಣಿ ತಾಲೂಕಿನ ಕವಟಕೊಪ್ಪ ಗ್ರಾಮದಲ್ಲಿ ಜನಿಸಿ ಸನ್ಯಾಸತ್ವ ಸ್ವೀಕಾರ ಮಾಡಿದ್ದರು. ಉತ್ತರ ಭಾರತದಲ್ಲಿ ಧರ್ಮಬೋಧನೆ ಮಾಡಿ ಕೀರ್ತಿ ಪಡೆದಂತ ಮಹಾಮುನಿ ಮಹಾರಾಜರು ಇವರು. ಈ ಘಟನೆಯಿಂದ ಮನನೊಂದಿದ್ದು, ತುಂಬಲಾರದ ನಷ್ಟ ಅನುಭವಿಸುತ್ತಿದ್ದೇವೆ. ಇದನ್ನ ಯಾರೂ ಸಹಿಸಲು ಸಾಧ್ಯವಿಲ್ಲ. ಇಂತಹ ಸನ್ಯಾಸಿ, ಮಹಾತ್ಮರಿಗೆ, ಮಹಾ ಮುನಿಗಳಿಗೆ ಆಗುತ್ತೆ ಅಂದ್ರೆ ನಾವೆಲ್ಲರೂ ನಾಗರಿಕ ಸಮಾಜ ತಲೆತಗ್ಗಿಸುವಂತ ಸಂದರ್ಭ ಬಂದಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಜೈನಮುನಿಗಳ ಹತ್ಯೆ ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ಆಗುತ್ತಿಲ್ಲ ಎಂಬ ಬಿಜೆಪಿ ನಾಯಕರ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಇದರಲ್ಲಿ ದಯವಿಟ್ಟು ಯಾರೂ ರಾಜಕಾರಣ ಬೆರೆಸುವುದನ್ನ ಮಾಡಬಾರದು. ರಾಜಕಾರಣ ಪ್ರೇರಿತ ಘಟನೆ ಅಲ್ಲ. ಇದು ಅಹಿತಕರ ಘಟನೆ. ಇದನ್ನು ಪಕ್ಷಾತೀತವಾಗಿ ಖಂಡಿಸಬೇಕು. ಆರೋಪಿಗಳಿಗೆ ಶಿಕ್ಷೆ ನೀಡಲು ಎಲ್ಲರೂ ಕೈಜೋಡಿಸಬೇಕು. ಧರ್ಮ ನ್ಯಾಯಸಮ್ಮತ ಹೋರಾಟ ಮಾಡಬೇಕು. ಇಂತಹ ಘಟನೆ ಮುಂದೆ ಆಗಬಾರದು ಅಂತಾ ಸಂದೇಶ ಇಡೀ ದೇಶಕ್ಕೆ ಕೊಡುವ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ವಿರೋಧ ಪಕ್ಷದ ನಮ್ಮ ಆತ್ಮೀಯ ಸ್ನೇಹಿತರಿಗೆ ಕಿವಿಮಾತು ಹೇಳುತ್ತೇನೆ. ಇಂತಹ ದುರ್ಘಟನೆ ಸಂದರ್ಭದಲ್ಲಿ ರಾಜಕೀಯ ಬೆರೆಸುವುದನ್ನು ಮಾಡಬೇಡಿ ಎಂದು ಸವದಿ ಮನವಿ ಮಾಡಿದರು.

ಇದನ್ನೂ ಓದಿ :ಪಂಚಭೂತಗಳಲ್ಲಿ ಲೀನರಾದ ಜೈನ ಮುನಿ: ಜೈನ ಸಂಪ್ರದಾಯದಂತೆ ನೆರವೇರಿದ ಅಂತ್ಯಕ್ರಿಯೆ

Last Updated : Jul 9, 2023, 5:39 PM IST

ABOUT THE AUTHOR

...view details