ಶಿವಮೊಗ್ಗ:ಅಂತರ ಜಿಲ್ಲಾ ದೇವಾಲಯಗಳಲ್ಲಿ ಕಳವು ಮಾಡಿದ್ದ ಇಬ್ಬರು ಹುಂಡಿ ಕಳ್ಳರನ್ನು ಹೊಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ, ಹಾವೇರಿ ದಾವಣಗೆರೆ ಜಿಲ್ಲೆಯ ಒಟ್ಟು 12 ದೇವಾಲಯಗಳಲ್ಲಿ ಹುಂಡಿಗಳ ಕಳ್ಳತನ ಮಾಡಿರುವುದು ಬಯಲಿಗೆ ಬಂದಿದೆ. ದಾವಣಗೆರೆ ಜಿಲ್ಲೆ ಹೂನ್ನಾಳಿ ತಾಲೂಕು ಬುಳ್ಳಾಪುರ ಗ್ರಾಮದ ಚಿನ್ನು ಅಲಿಯಾಸ್ ಡಿ.ಜೆ (26) ಹಾಗೂ ಶಿವಮೊಗ್ಗ ತಾಲೂಕು ತರಗನಹಳ್ಳಿ ಗ್ರಾಮದ ಮಣಿಕಂಠ ಅಲಿಯಾಸ್ ಮಣಿ(26) ಬಂಧಿತ ಕಳ್ಳರು.
ಕಳೆದ ತಿಂಗಳು ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಜಂಬರಗಟ್ಟೆ ಗ್ರಾಮದ ಆಂಜನೇಯ ದೇವಾಲಯದ ಹುಂಡಿ ಕಳ್ಳತನ ಮಾಡಲಾಗಿತ್ತು. ಹುಂಡಿ ಕಳ್ಳತನದ ಆರೋಪಿಗಳನ್ನು ಪತ್ತೆಗೆ ಪೊಲೀಸರು ಜಾಲ ಬೀಸಿದ್ದರು. ಪೊಲೀಸರು ತಕ್ಷಣ ಈ ಪ್ರಕರಣದಡಿ ಇಬ್ಬರು ಆರೋಪಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದ ಬಳಿಕ ಆರೋಪಿಗಳು ತಮ್ಮ ಹಿಂದಿನ ಎಲ್ಲ ಕೃತ್ಯಗಳನ್ನು ಬಾಯ್ಬಿಟ್ಟಿದ್ದಾರೆ.
ವಿವಿಧ ಜಿಲ್ಲೆಯ 12 ದೇವಾಲಯಗಳಲ್ಲಿ ಹುಂಡಿ ಕಳ್ಳತನ:ಬಂಧಿತರು ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿ 3, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿ 1, ಹಾವೇರಿಯ ರಟ್ಟೆಹಳ್ಳಿ - 3, ದಾವಣಗೆರೆ ಹೊನ್ನಾಳಿ-1, ಚನ್ನಗಿರಿಯಲ್ಲಿ 1, ಸಂತೆಬೆನ್ನೂರು-1 ಹೀಗೆ ಒಟ್ಟು 12 ದೇವಾಲಯದ ಹುಂಡಿ ಕಳ್ಳತನ ಮಾಡಿದ್ದಾರೆ. ಅಲ್ಲದೇ ಕಳ್ಳತನಕ್ಕೆ ತರಿಕೆರೆ ಪೊಲೀಸ್ ಠಾಣೆಯಲ್ಲಿದ್ದ 1 ಬೈಕ್ ಕಳ್ಳತನ ಸಹ ಮಾಡಿದ್ದಾರೆ. ಹುಂಡಿ ಹಾಗೂ ಬೈಕ್ ಕಳ್ಳತನ ಸೇರಿ ಒಟ್ಟು 72 ಸಾವಿರ ರೂ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದೇವಾಲಯದ ಹುಂಡಿ ಕಳ್ಳತನದ ಪ್ರಕರಣ ಭೇದಿಸುವ ತಂಡದಲ್ಲಿ ಹೊಳೆಹೊನ್ನೂರು ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಆರ್.ಎಲ್.ಲಕ್ಷ್ಮಿಪತಿ, ಪಿಎಸ್ಐಗಳಾದ ಸುರೇಶ್, ರಮೇಶ್ ಸಿಬ್ಬಂದಿ ಲಿಂಗೇಗೌಡ, ಮಂಜುನಾಥ, ವಿಶ್ವನಾಥ, ಚಂದ್ರಶೇಖರ್, ಮೊಹಬೂಬ್ ಹಾಗೂ ಸುದರ್ಶನ ಭಾಗವಹಿಸಿದ್ದರು.