ಶಿವಮೊಗ್ಗ: ಜೋಗ ಜಲಪಾತದ ಸಮಗ್ರ ಅಭಿವೃದ್ಧಿ ಯೋಜನೆಯ ಕಾಮಗಾರಿ ಭರದಿಂದ ಸಾಗುತ್ತಿದೆ. ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ. 2024ರ ಜನವರಿಯಲ್ಲಿ ಲೋಕಾರ್ಪಣೆ ಮಾಡಲಾಗುತ್ತದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು. ಮಂಗಳವಾರ ನಗರದಲ್ಲಿ ಜೋಗದ ಸಮಗ್ರ ಅಭಿವೃದ್ಧಿಯ ಕುರಿತು ಮಾತನಾಡಿದ ಅವರು, ಜೋಗ ಜಲಪಾತದ ಅಭಿವೃದ್ದಿಗೆ ಮಾಜಿ ಸಿಎಂ ಯಡಿಯೂರಪ್ಪನವರು ಬಜೆಟ್‌ನಲ್ಲಿ ಜಿಎಸ್ಟಿ ಸಮೇತ 185 ಕೋಟಿ ರೂಪಾಯಿ ಅನುದಾನ ನೀಡಿದ್ದರು. ಈಗಾಗಲೇ ವೀಕ್ಷಣೆ ಮಾಡಿದಾಗ ಶೇ 80ರಷ್ಟು ಕಾಮಗಾರಿ ಮುಕ್ತಾಯವಾಗಿದೆ. ಡಿಸೆಂಬರ್ನಲ್ಲಿ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಜೋಗದಲ್ಲಿ ಪ್ರವೇಶ ದ್ವಾರ, ಮಕ್ಕಳ ಉದ್ಯಾವನ, ಉಪಹಾರ ಗೃಹ, ವಿಶ್ರಾಂತಿ ಕೊಠಡಿ, ರೋಪ್ ವೇ ನಿರ್ಮಾಣ, ಶಿವಮೊಗ್ಗ ಜಿಲ್ಲೆಯಿಂದ ಉತ್ತರ ಕನ್ನಡ ಜಿಲ್ಲೆಗೆ ರೋಪ್ ವೇ ನಿರ್ಮಾಣ ಆಗಲಿದೆ. ಪ್ರವಾಸಿಗರಿಗಾಗಿ ಪ್ರವಾಸಿ ಮಂದಿರ ಸಿದ್ಧಗೊಳ್ಳಲಿದೆ. ಕಾಮಗಾರಿ ನಿಗದಿತ ಸಮಯದೊಳಗೆ ಮುಗಿಯಬೇಕು. ಇದರ ಅನುಕೂಲತೆ ಎಲ್ಲರಿಗೂ ಸಿಗಬೇಕು ಎಂದರು.
ಇಲ್ಲಿನ ಪ್ರವಾಸೋದ್ಯಮ ಬೆಳೆಯಬೇಕು. ಶಿವಮೊಗ್ಗದ ವಿಮಾನ ನಿಲ್ದಾಣದಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಇದು ವಿಶ್ವಮಟ್ಟದ ಪ್ರವಾಸಿ ತಾಣವಾಗಬೇಕು. ಜೋಗ ಅಭಿವೃದ್ದಿ ಕಾಮಗಾರಿ ಯೋಜನೆಗೆ ರಾಜ್ಯ ಸರ್ಕಾರ ಸಹಕಾರ ನೀಡಬೇಕಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸಹಕರಿಸಬೇಕು. ಕಾಮಗಾರಿಗೆ ಬೇಕಾದ ಎಲ್ಲ ಹಣವನ್ನು ಮೊದಲೇ ನೀಡಲಾಗಿದೆ. ಅರಣ್ಯ ಸಂಬಂಧ ಇದ್ದ ಸಮಸ್ಯೆಯನ್ನು ನಿವಾರಿಸಲಾಗಿದೆ ಎಂದು ತಿಳಿಸಿದರು.
ಮಳೆಗಾಲದಲ್ಲಿ ಜಲಪಾತವನ್ನು ಜನ ನಿಂತು ನೋಡಲು ಯಾವುದೇ ವ್ಯವಸ್ಥೆಗಳು ಇರಲಿಲ್ಲ. ಈಗ ನಡೆಯುತ್ತಿರುವ ಕಾಮಗಾರಿಯಿಂದ ತೀರಾ ಹತ್ತಿರದಿಂದ ನೋಡಬಹುದು. ಒಂದೇ ಸಲ ಮೂರು ಸಾವಿರ ಪ್ರವಾಸಿಗರು ನಿಂತು ನೋಡಲು ಅನುಕೂಲವಾಗುವ ಗ್ಯಾಲರಿಗಳನ್ನು ಮಾಡಲಾಗುತ್ತಿದೆ. ಗೇಟ್‌ನಿಂದ ಒಂದೇ ಸಲ 10 ಸಾವಿರ ಮಂದಿ ಒಳಬಂದು ಶಾಪಿಂಗ್ ಮುಗಿಸಿಕೊಂಡು ಬಂದು ಜೋಗ ನೋಡಬಹುದಾಗಿದೆ. ಮಳೆಯಲ್ಲೂ ಜೋಗದ ಸೂಬಗು ಕಣ್ತುಂಬಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಇಷ್ಟೊಂದು ದೊಡ್ಡ ಪ್ರವಾಸಿ ತಾಣಕ್ಕೆ ಪಾರ್ಕಿಂಗ್ ವ್ಯವಸ್ಥೆ ಮುಖ್ಯ. ಇದಕ್ಕಿದ್ದ ಕಾನೂನು ತೊಡಕುಗಳು ಪರಿಹಾರವಾಗಿವೆ. ಜೋಗ ಅಭಿವೃದ್ದಿ ಪ್ರಾಧಿಕಾರದಿಂದಲೇ ಕಾಮಗಾರಿ ನಡೆಸಲಾಗುತ್ತಿದೆ. ಜೋಗಕ್ಕೆ ಬಂದವರು ಎರಡು ದಿನ ಇಲ್ಲೇ ಇದ್ದು ಹೋಗುವ ಅವಕಾಶ ಮಾಡಲಾಗಿದೆ. ಜೋಗದ ಪರಿಸರಕ್ಕೆ ಸಮಸ್ಯೆ ಆಗದಂತೆ ಕಾಮಗಾರಿ ನಡೆಯುತ್ತಿದೆ ಎಂದು ಹೇಳಿದರು.
183 ಕೋಟಿ ರೂ ವೆಚ್ಚ:ಜೋಗವನ್ನು ಇನ್ನಷ್ಟು ಸುಂದರವನ್ನಾಗಿಸಲು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರು ತಮ್ಮ ಬಜೆಟ್‌ನಲ್ಲಿ ಜೋಗದ ಸಮಗ್ರ ಅಭಿವೃದ್ದಿಗೆ 183 ಕೋಟಿ ರೂ ಮೀಸಲಿಟ್ಟಿದ್ದರು. ಅಂದು ತಾವೇ ಗುದ್ದಲಿ ಪೂಜೆಯನ್ನು ನೇರವೇರಿಸಿದ್ದರು. ಈಗ ಅಭಿವೃದ್ದಿ ಕಾಮಗಾರಿಯ ಶೇ.80ರಷ್ಟು ಕೆಲಸ ಮುಗಿದಿದೆ. 2023ರ ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಮುಕ್ತಾಯವಾಗಲಿದೆ ಎಂದರು.
ಅಭಿವೃದ್ದಿ ಕಾಮಗಾರಿಗಳ ವಿವರ: ಜೋಗ ಜಲಪಾತಕ್ಕೆ ಪ್ರವೇಶ ಪಡೆಯಲು ಪ್ರವೇಶ ದ್ವಾರ, ಶರಾವತಿ ದೇವಿಯ ವಿಗ್ರಹ, ದ್ವಾರ ಮೂಲಕ ಜೋಗ ಜಲಪಾತಕ್ಕೆ ಪ್ರವೇಶ ಪಡೆದರೆ ಅಲ್ಲಿ ವಾಕಿಂಗ್ ಪಾಥ್ ಸಿಗುತ್ತದೆ. ವಾಕಿಂಗ್ ಪಾಥ್ ಮೂಲಕ ಮೇಲಕ್ಕೆ ಹೋಗುವ ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ಮೊದಲು ಶಾಪಿಂಗ್ಗಾಗಿ ಮಳಿಗೆ ಸಿಗುತ್ತವೆ. ಶಾಪಿಂಗ್ ಮಳಿಗೆಯಿಂದ ಜೋಗವನ್ನು ಹತ್ತಿರದಿಂದ ನೋಡಲು ಗ್ಯಾಲರಿಗಳನ್ನು ನಿರ್ಮಾಣ ಮಾಡಲಾಗಿದೆ. ಇದು ವಿಶ್ವ ವಿಖ್ಯಾತ ನಯಾಗರ ಫಾಲ್ಸ್ ನಲ್ಲಿ ಇರುವಂತೆ ಜಲಪಾತವನ್ನು ಹತ್ತಿರದಿಂದ ನೋಡುವ ಗ್ಯಾಲರಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ಇದರ ಜೊತೆಗೆ ಮಕ್ಕಳ ಉದ್ಯಾನವನ, ಉಪಹಾರ ಗೃಹಗಳು, ವಿಶ್ರಾಂತಿ ಗೃಹಗಳ ನಿರ್ಮಾಣ ಮಾಡಲಾಗುತ್ತಿದೆ. ಜೊತೆಗೆ ಜೋಗದ ಸಿರಿಯನ್ನು ನೋಡಲು ರೋಪ್ ವೇ ಅನ್ನು ಮಾಡಲಾಗುತ್ತಿದೆ. ಈ ರೋಪ್ ವೇ ಜೋಗದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಅಂದರೆ, ಜೋಗದ ಎದುರು ಭಾಗದಿಂದ ಜೋಗದ ಬ್ರಿಟಿಷ್ ಬಂಗ್ಲೆ ಬಳಿ ತನಕ ರೋಪ್ ವೇ ನಿರ್ಮಾಣ ಮಾಡಲಾಗುತ್ತದೆ. ಜೋಗಕ್ಕೆ ಬರುವ ಪ್ರವಾಸಿಗರು ಒಂದು ದಿನ ಜೋಗದಲ್ಲಿ ಎಂಜಾಯ್ ಮಾಡಿದರೆ ಇನ್ನೊಂದು ದಿನ ತಲಕಳಲೆ ಡ್ಯಾಂನಲ್ಲಿ ಜಲಕ್ರೀಡೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಇಲ್ಲಿ ಬೋಟಿಂಗ್, ವಾಟರ್ ಸ್ಪೋರ್ಟ್ ನಂತಹ ಮನರಂಜನೆಯನ್ನು ಒದಗಿಸಲಾಗುತ್ತದೆ. ಇದರಿಂದ ಜೋಗಕ್ಕೆ ಬಂದವರು ಎರಡು ದಿನ ಇಲ್ಲೆ ಉಳಿಯುವಂತೆ ಅವಕಾಶ ಮಾಡಲಾಗಿದೆ. ಇದಕ್ಕಾಗಿ ಜೋಗದಲ್ಲಿ ಸುಮಾರು 80 ರೂಂನ ಒಂದು ಪ್ರವಾಸಿ ಮಂದಿರವನ್ನು ನಿರ್ಮಾಣ ಮಾಡಲಾಗುತ್ತಿದೆ.
ಜೋಗ ಜಲಪಾತದ ನಿರ್ವಹಣೆಯು ಜೋಗ ಅಭಿವೃದ್ದಿ ಪ್ರಾಧಿಕಾರ ನಿರ್ವಹಣೆ ಮಾಡಲಿದೆ. ಇದರ ಅಧ್ಯಕ್ಷರಾಗಿ ಜಿಲ್ಲಾಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ಇದು ಜೋಗ - ಕಾರ್ಗಲ್ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಒಳಪಡುತ್ತದೆ. ಇದರಿಂದ ಕಾರ್ಗಲ್- ಜೋಗ ಪಟ್ಟಣ ಪಂಚಾಯತಿಯವರು ಜೋಗ ಅಭಿವೃದ್ದಿಯಿಂದ ಬರುವ ಹಣದಲ್ಲಿ ಪಟ್ಟಣ ಪಂಚಾಯತಿಗೂ ಸಹ ಸ್ವಲ್ಪ ಹಣ ನೀಡಿದರೆ ಪಟ್ಟಣದ ಸಮಗ್ರ ಅಭಿವೃದ್ದಿಗೆ ಸಹಕಾರವಾಗುತ್ತದೆ ಎಂದು ಪಟ್ಟಣ ಪಂಚಾಯತಿ ಐದನೇ ವಾರ್ಡ್ ಸದಸ್ಯರಾದ ವಾಸಂತಿ ಒತ್ತಾಯಿಸಿದರು.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಜೋಗ ಜಲಪಾತವು ಶರಾವತಿ ನದಿಯಿಂದ ಪ್ರಸಿದ್ದಿಯನ್ನು ಪಡೆದಿದೆ. ಜೋಗ ಜಲಪಾತದಲ್ಲಿ ಶರಾವತಿ ನದಿಯು 920 ಮೀಟರ್ ಎತ್ತರದಿಂದ ನೆಲಕ್ಕೆ ಧುಮ್ಮುಕ್ಕುತ್ತದೆ. ಹೀಗೆ ಧುಮ್ಮಿಕ್ಕುವಾಗ ಐದು ಕವಲುಗಳಲ್ಲಿ ಕಾಣಸಿಗುತ್ತದೆ. ರಾಜ, ರಾಣಿ, ರೂರಲ್, ಲೇಡಿ, ರಾಕೆಟ್ ಎಂದು ಐದು ಕವಲುಗಳಲ್ಲಿ ನೋಡುಗರಿಗೆ ರಂಜಿಸಿ ಕೆಳಕ್ಕೆ ಇಳಿದು ಗೇರುಸೂಪ್ಪಿಯ ಮೂಲಕ ಅರಬ್ಬಿ ಸಮುದ್ರವನ್ನು ಸೇರುತ್ತಾಳೆ.
ಇದನ್ನೂ ಓದಿ :ರಾಜ್ಯ ಸರ್ಕಾರದ ಹಣಕಾಸು ವ್ಯವಹಾರಗಳಲ್ಲಿ ಲೋಪದೋಷ: ಸಿಎಜಿ ವರದಿಯಲ್ಲೇನಿದೆ?