ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್. ಈಶ್ವರಪ್ಪನವರು ಹುಚ್ಚನಹಾಗೆ ಮಾತನಾಡುವುದನ್ನು ಬಿಟ್ಟು, ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ ಮಾಡಿ ತೋರಿಸಲಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ಅವರು, ಶಿವಮೊಗ್ಗ ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಯು ಕಳಪೆಯಿಂದ ಕೂಡಿದೆ. ಈ ಬಗ್ಗೆ ಯಾವುದೇ ಮಾತನ್ನು ಈಶ್ವರಪ್ಪ ಆಡುವುದಿಲ್ಲ. ನಗರದ ಜನತೆ ಕಳೆದ 25 ವರ್ಷಗಳಿಂದ ಆಶೀರ್ವಾದ ಮಾಡಿದ್ದಾರೆ. ಅವರಿಗೆ ಒಳ್ಳೆಯದನ್ನು ಮಾಡಬೇಕಲ್ವ ಎಂದು ಪ್ರಶ್ನಿಸಿದರು.
ಸಚಿವ ಈಶ್ವರಪ್ಪ ವಿರುದ್ಧ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ವಾಗ್ದಾಳಿ ನಮ್ಮ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರನ್ನು ಬೈಯ್ದರೆ ತಾವು ದೊಡ್ಡ ಲೀಡರ್ ಆಗ್ತಾರೆ ಅಂತ ತಿಳಿದುಕೊಂಡು ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ದೇಶಕ್ಕೆ ನರೇಂದ್ರ ಮೋದಿ ಕೊರೊನಾ ಹರಡಿಸಿದರೆ, ಶಿವಮೊಗ್ಗಕ್ಕೆ ಈಶ್ವರಪ್ಪ ಕೊರೊನಾ ಹರಡಿಸಿದರು. ದೇಶದಲ್ಲಿ ಕೊರೊನಾ ಹೆಚ್ಚಾಗಲು ಪ್ರಧಾನಿ ನರೇಂದ್ರ ಮೋದಿ ಕಾರಣ, ಹಾಗೆಯೇ ಶಿವಮೊಗ್ಗದಲ್ಲಿ ಕೊರೊನಾ ಹರಡಲು ಸಚಿವ ಈಶ್ವರಪ್ಪನವರು ಕಾರಣರಾಗಿದ್ದರೆ ಎಂದರು.
ತಮಿಳುನಾಡಿನ ಓಂಶಕ್ತಿಗೆ ಮಹಿಳೆಯರನ್ನು ಕರೆದುಕೊಂಡು ಹೋಗಿ ಕೊರೊನಾ ಹರಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ತಮಿಳುನಾಡಿಗೆ ಹೋಗಿ ಬಂದ ಈಶ್ವರಪ್ಪನವರು ಕ್ವಾರಂಟೈನ್ ಆಗಬೇಕಿತ್ತು. ಆದರೆ ಆಗಿಲ್ಲ. ದೇವಾಲಯಕ್ಕೆ ಕರೆದುಕೊಂಡು ಹೋದ ಮೇಲೆ ಕೊರೊನಾ ಬಂದಿದೆ. ಇದರಿಂದ ಕೊರೊನಾ ಬಂದವರಿಗೆ ತಲಾ 50 ಸಾವಿರ ರೂ. ನೀಡಿ ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಕಾಂಗ್ರೆಸ್ನವರು ರಾಜ್ಯದ ಜನತೆಗೆ ಕೊರೊನಾ ಅಂಟಿಸುತ್ತಿದ್ದಾರೆ: ಸಚಿವ ಈಶ್ವರಪ್ಪ
ನಮ್ಮ ನಾಯಕರು ರಾಜ್ಯದ ನೀರಾವರಿಗಾಗಿ ಪಾದಯಾತ್ರೆ ನಡೆಸಿದ್ರೆ, ಅವರ ಮೇಲೆ ಕೇಸ್ ಹಾಕಲಾಗುತ್ತಿದೆ. ಅದೇ ರೀತಿ ರೇಣುಕಾಚಾರ್ಯ ಹಾಗೂ ಮಾಲೀಕಯ್ಯ ಗುತ್ತೆದಾರ್ ಅವರ ವಿರುದ್ಧ ಸಹ ಕೇಸ್ ದಾಖಲಿಸಲಿ ಎಂದು ಅಗ್ರಹಿಸಿದರು.
ಜನವರಿ 19 ರಂದು ಮೇಕೆದಾಟು ಪಾದಯಾತ್ರೆ ಮುಕ್ತಾಯವಾಗುತ್ತದೆ. ಅಂದು ಶಿವಮೊಗ್ಗದಿಂದ ಸುಮಾರು ಎರಡು ಸಾವಿರ ಮುಖಂಡರು ಭಾಗಿಯಾಗಲಿದ್ದೇವೆ. ಅಂದು ಕೆಪಿಸಿಸಿ ಕಚೇರಿಯಿಂದ ನ್ಯಾಶನಲ್ ಮೈದಾನದ ತನಕ ಪಾದಯಾತ್ರೆಯಲ್ಲಿ ನಡೆದು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇವೆ ಎಂದರು.