ಶಿವಮೊಗ್ಗ: ವಾಹನ ಸವಾರರು ಇನ್ಮುಂದೆ ಶಿವಮೊಗ್ಗ ನಗರದಲ್ಲಿ ಸಂಚರಿಸುವಾಗ ಎಚ್ಚರಿಕೆಯಿಂದ ಇರುವುದು ಅಗತ್ಯ. ನಿಮ್ಮನ್ನು ಗಮನಿಸಲು ಸಿಸಿ ಕ್ಯಾಮರಾಗಳು ಕಾರ್ಯಾರಂಭ ಮಾಡಿವೆ. ನಗರದ ಎಲ್ಲಾ ಪ್ರಮುಖ ವೃತ್ತಗಳಲ್ಲಿ ಸುಧಾರಿತ ಕ್ಯಾಮರಾಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಅಳವಡಿಸಲಾಗಿದೆ. ಈ ಕ್ಯಾಮರಾಗಳು ಕಾರ್ಯಾರಂಭಿಸಿದ್ದು, ವಾಹನ ಸವಾರರು ಸಂಚಾರಿ ನಿಯಮ ಉಲ್ಲಂಘಸಿದರೆ ತಕ್ಷಣ ಗಮನಿಸಿ ನಿಯಮ ಉಲ್ಲಂಘಿಸಿದ ವಾಹನದ ಮಾಲೀಕರಿಗೆ ಎಸ್ಎಂಎಸ್ ಮೂಲಕ ಮಾಹಿತಿ ಒದಗಿಸಲಾಗುತ್ತದೆ.
ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಮಾತನಾಡಿ, "ಶಿವಮೊಗ್ಗ ನಗರದಲ್ಲಿ ವಿವಿಧ ಶ್ರೇಣಿಯ ಕ್ಯಾಮರಾಗಳಿವೆ. ಸುಮಾರು 100ಕ್ಕೂ ಅಧಿಕ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸಿಗ್ನಲ್ ಲೈಟ್ ಜಂಪ್ ಮಾಡುವುದು, ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಸಾಗುವುದು, ಹೆಲ್ಮೆಟ್ ಧರಿಸದೆ ಸಂಚರಿಸುವವರನ್ನು ಅತ್ಯಾಧುನಿಕ ಕ್ಯಾಮರಾಗಳು ಸೆರೆ ಹಿಡಿಯುತ್ತವೆ. ನಗರದ 14 ವೃತ್ತದಲ್ಲಿ ಹಾಗೂ ಪ್ರಮುಖ ರಸ್ತೆಯಲ್ಲಿ ಈ ರೀತಿಯ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಆಗಸ್ಟ್ 28 ರಿಂದ ಈ ಕ್ಯಾಮರಾಗಳಿಂದ ದಂಡ ವಿಧಿಸುವ ಪ್ರಕ್ರಿಯೆ ಪ್ರಾರಂಭವಾಗಲಿದೆ" ಎಂದು ತಿಳಿಸಿದರು.
"ಸಂಚಾರಿ ನಿಯಮ ಉಲ್ಲಂಘನೆ ಮಾಡುವ ವಾಹನದ ನಂಬರ್ ಪ್ಲೇಟ್ ಅನ್ನು ಕ್ಯಾಮರಾ ಗುರುತಿಸುತ್ತದೆ. ಇವು ಸ್ಮಾರ್ಟ್ ಸಿಟಿಯ ಕಮಾಂಡೆಂಟ್ ಕಂಟ್ರೋಲ್ ಸೆಂಟರ್ಗೆ ಮಾಹಿತಿ ಒದಗಿಸುತ್ತವೆ. ಇಲ್ಲಿ ಪೊಲೀಸ್ ಸಿಬ್ಬಂದಿ ಇರುತ್ತಾರೆ. ಅಲ್ಲಿಂದ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ವಾಹನ ಮಾಲೀಕರಿಗೆ ನೇರವಾಗಿ ಎಸ್ಎಂಎಸ್ ಮೂಲಕ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ವಿಷಯ ತಿಳಿಸಲಾಗುತ್ತದೆ. ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಎಸ್ಎಂಎಸ್ ಮೂಲಕ ಒಂದು ಲಿಂಕ್ ಕಳುಹಿಸಲಾಗುತ್ತದೆ, ಅದರಲ್ಲಿ ನಿಯಮ ಉಲ್ಲಂಘಿಸಿದ ಸ್ಥಳದ ಫೋಟೋಸಮೇತ ದಂಡದ ವಿವರ ಇರಲಿದೆ. ಈ ದಂಡವನ್ನು ಭಾರತದ ಯಾವುದೇ ಸ್ಥಳದಿಂದ ಬೇಕಾದರೂ ಪಾವತಿಸಬಹುದು" ಎಂದು ಮಾಹಿತಿ ನೀಡಿದರು.