ಶಿವಮೊಗ್ಗ: ಭದ್ರ ಅಣೆಕಟ್ಟೆಯಿಂದ ಬಲ ಮತ್ತು ಎಡದಂಡೆ ನಾಲೆಗಳಿಗೆ ಮೇ ತಿಂಗಳ ಅಂತ್ಯದವರೆಗೆ ನೀರು ಹರಿಸಬೇಕೆಂದು ಒತ್ತಾಯಿಸಿ ಮಲವಗೊಪ್ಪ ಕಾಡ ಕಚೇರಿ ಎದುರು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪ್ರತಿಭಟನೆ ನಡೆಸಲಾಯಿತು.
ಬೇಸಿಗೆ ಹಂಗಾಮಿನಲ್ಲಿ ರೈತರು ಭತ್ತ ಬೆಳೆಯುವ ಸಲುವಾಗಿ ಭದ್ರಾ ಅಣೆಕಟ್ಟೆಯಿಂದ ನೀರು ಹರಿಸಲಾಗಿದೆ. ಇದೇ ನೀರನ್ನು ನೆಚ್ಚಿಕೊಂಡು ಅಚ್ಚುಕಟ್ಟು ಪ್ರದೇಶದ ರೈತರು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆದಿದ್ದಾರೆ. ರೈತರು ಬೆಳೆದ ಭತ್ತದ ಬೆಳೆ ತೆನೆ ಬಿಟ್ಟು ಹೂ ಕಟ್ಟುವ ಸಮಯವಾಗಿದೆ. ಆದರೆ ಈ ಹಿಂದೆಯೇ ಸರ್ಕಾರ ತೀರ್ಮಾನಿಸಿದಂತೆ ಮೇ ತಿಂಗಳ 8 ರಂದು ನಾಲೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸುವುದಾಗಿ ಪ್ರಕಟಿಸಲಾಗಿದೆ.
ಆದರೆ ರೈತರು ಬೆಳೆದಿರುವ ಭತ್ತದ ಬೆಳೆ ಇನ್ನು ಕೂಡ ಕಟಾವಿನ ಹಂತಕ್ಕೆ ಬಂದಿಲ್ಲ. ಕನಿಷ್ಠ ಇನ್ನು 20 ದಿನಗಳ ಕಾಲ ಭತ್ತದ ಬೆಳೆಗಳಿಗೆ ನೀರು ಉಣಿಸಬೇಕಾಗಿದೆ. ಹಾಗಾಗಿ ಇನ್ನೂ 20 ದಿನಗಳ ಕಾಲ ನೀರು ಬಿಡಬೇಕು. ಇಲ್ಲವಾದರೆ ರೈತರು ಬೆಳೆದ ಭತ್ತದ ಬೆಳೆ ಸಂಪೂರ್ಣ ನಾಶವಾಗುತ್ತದೆ. ಇದನ್ನೇ ನಂಬಿಕೊಂಡು ರೈತರು ಬದುಕಿದ್ದಾರೆ. ನೀರು ಬಿಡದೆ ಹೋದಲ್ಲಿ ರೈತರ ಬದುಕು ಮೂರಾಬಟ್ಟೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಕೂಡಲೇ ಗಮನ ಹರಿಸಿ ಮೇ ತಿಂಗಳ ಅಂತ್ಯದವರೆಗೆ ಭದ್ರ ಎಡದಂಡೆ ನಾಲೆಗಳಲ್ಲಿ ನೀರು ಹರಿಸುವ ಮೂಲಕ ರೈತರು ಬೆಳೆದ ಬೆಳೆಗೆ ನಷ್ಟವಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಮೇ ತಿಂಗಳ ಅಂತ್ಯದವರೆಗೆ ಭದ್ರ ಅಣೆಕಟ್ಟೆಯಿಂದ ಎಡ ಮತ್ತು ಬಲದಂಡೆ ನಾಲೆಗಳಿಗೆ ನೀರು ಬಿಡುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಿದರು.