ಶಿವಮೊಗ್ಗ:ಕಾವೇರಿ ನದಿ ನೀರು ಹರಿಸುವಿಕೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಕಾವೇರಿ ವಿಷಯದಲ್ಲಿ ನಮ್ಮ ರಾಜ್ಯಕ್ಕೆ ಹಿನ್ನಡೆ ಆಗುತ್ತಿದೆ. ನ್ಯಾಯಾಲಯದ ತೀರ್ಮಾನ ನಮಗೆ ಸಮಾಧಾನ ಇಲ್ಲ. ಸುಪ್ರೀಂ ಕೋರ್ಟ್ಗೆ ಹೋಗಿ ಮೇಲ್ಮನವಿ ಮಾಡಿ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು. ಈ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು ಎಂದು ಸಲಹೆ ನೀಡಿದರು.
ಬೆಳಗಾವಿಯಲ್ಲಿ ಅಧಿವೇಶನ ನಡೆಸಬೇಕು: ಉತ್ತರ ಕರ್ನಾಟಕದ ಸಮಸ್ಯೆ ಪರಿಹಾರಕ್ಕಾಗಿಯೇ ಬೆಳಗಾವಿಯಲ್ಲಿ ಅಧಿವೇಶನ ನಡೆಯಬೇಕೆಂದು ದೊಡ್ಡ ಸೌಧ ಕಟ್ಟಿದ್ದೇವೆ. ಬೆಳಗಾವಿಯಲ್ಲಿ ಅಧಿವೇಶನ ವರ್ಷಕ್ಕೊಮ್ಮೆ ಮಾಡಬೇಕು. ಅಲ್ಲಿ ಅಧಿವೇಶನ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳುವುದು ರಾಜ್ಯ ಸರ್ಕಾರಕ್ಕೆ ಬಿಟ್ಟಿದ್ದು ಎಂದರು.
ಲೋಡ್ ಶೆಡ್ಡಿಂಗ್:ಅನಿಯಮಿತ ವಿದ್ಯುತ್ ಶಾಕ್ ಅನ್ನು ರಾಜ್ಯ ಸರ್ಕಾರ ನೀಡುತ್ತಿದೆ. ರೈತರ ಪಂಪಸೆಟ್ಗೆ ನೀರು ಸಿಗುತ್ತಿಲ್ಲ. ಅಲ್ಪ ಸ್ವಲ್ಪ ಬೆಳೆ ಮಾಡಲೂ ಆಗದ ಪರಿಸ್ಥಿತಿ ನಿರ್ಮಾಣ ಆಗಿದೆ. ಕೂಡಲೇ ಸರ್ಕಾರ ವಿದ್ಯುತ್ ಒದಗಿಸುವ ಬಗ್ಗೆ ಕ್ರಮ ವಹಿಸಬೇಕು ಎಂದರು.
ದಸರಾ ನಂತರ ರಾಜ್ಯ ಪ್ರವಾಸ:ಹಬ್ಬ ಮುಗಿದ ನಂತರ ರಾಜ್ಯ ಪ್ರವಾಸ ಕೈಗೊಳ್ಳುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ನಾನು ಈಗಾಗಲೇ ಪ್ರವಾಸಕ್ಕೆ ಹೊರಡಬೇಕಿತ್ತು. ಆದರೆ ಹಬ್ಬ ಮುಗಿದ ನಂತರ ಪ್ರವಾಸ ಕೈಗೊಳ್ಳುತ್ತೆನೆ ಎಂದರು.
ರಾಜ್ಯ ಸರ್ಕಾರದ ವೈಫಲ್ಯದಿಂದ ಮತ್ತೆ ಆದೇಶ - ಬೊಮ್ಮಾಯಿ ಕಿಡಿ:ಕಾವೇರಿ ನೀರು ನಿರ್ವಹಣೆ ಸಮಿತಿಯು ಮತ್ತೆ ಪ್ರತಿ ದಿನ 3000 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶ ನೀಡಿರುವ ವಿಚಾರದಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಕಾರಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಸಿಡಬ್ಲ್ಯೂಆರ್ಸಿ ತಮಿಳುನಾಡು ನಿಯಮಬಾಹಿರವಾಗಿ ನೀರು ಬಳಕೆ ಮಾಡಿಕೊಂಡಿರುವುದು ಹಾಗೂ ಕರ್ನಾಟಕದ ನೀರಿನ ಅಗತ್ಯತೆಯನ್ನು ಅರಿಯದೇ ಆದೇಶ ಮಾಡುತ್ತಿದೆ ಎಂದು ಕಳೆದ ದಿನ ಬೊಮ್ಮಾಯಿ ಅವರು ಆಕ್ರೋಶ ವ್ಯಕ್ತಪಡಿಸಿದ್ದರು.
ರಾಜ್ಯ ಸರ್ಕಾರವೂ ಸಿಡಬ್ಲುಎಂಎ ಹಾಗೂ ಸಿಡಬ್ಲುಆರ್ಸಿಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದಿನ ಆದೇಶಗಳ ವಿರುದ್ದ ಮಧ್ಯಂತರ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದರು. ಆದರೆ, ಇದುವರೆಗೂ ಹಾಕಿಲ್ಲ. ಇದರ ಪರಿಣಾಮ ರಾಜ್ಯದ ವಿರುದ್ಧ ಮತ್ತೊಂದು ಆದೇಶ ಬರುವಂತಾಗಿದೆ ಎಂದು ಬೊಮ್ಮಾಯಿ ಕಿಡಿಕಾರಿದ್ದರು.
ಓದಿ:ಏನೇ ಆದೇಶ ಬಂದರೂ ನಮ್ಮ ರೈತರ ಹಿತ ಕಾಪಾಡುತ್ತೇವೆ: ಡಿಸಿಎಂ ಡಿ.ಕೆ.ಶಿವಕುಮಾರ್