ಶಿವಮೊಗ್ಗ:ಸ್ವಂತ ಕಟ್ಟಡದ ಕೊರತೆ, ಶೌಚಗೃಹವಿಲ್ಲದೇ ವಿದ್ಯಾರ್ಥಿಗಳ ಪರದಾಟ, ಒಂದೇ ಕೊಠಡಿಯಲ್ಲಿ ಎರಡು ತರಗತಿಗಳೊಂದಿಗೆ ಮುಖ್ಯ ಶಿಕ್ಷಕರ ಕಚೇರಿ. ಇದು, ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣದ ಹೃದಯ ಭಾಗದಲ್ಲಿರುವ ಮೌಲಾನ ಆಜಾದ್ ಮಾದರಿ ಶಾಲೆಯ ದುಃಸ್ಥಿತಿ.
ಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೂಲಕ ರಾಜ್ಯದಲ್ಲಿ 2018 ಮತ್ತು 19ರಲ್ಲಿ ಒಟ್ಟು 200 ಶಾಲೆಗಳನ್ನು ಆರಂಭಿಸಿ, ಅಲ್ಪಸಂಖ್ಯಾತರ ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ದೊರಕಿಸಿಕೊಡುವ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ತರಲಾಯಿತು. ಈ ಪೈಕಿ ಜಿಲ್ಲೆಯಲ್ಲಿ 6 ಶಾಲೆಗಳು ಮಂಜೂರಾಗಿದ್ದು, ತಾಲೂಕಿನ ಒಂದು ಶಾಲೆ ಆರಂಭವಾದರೂ ಆರಂಭದ ದಿನದಿಂದಲೂ ಸ್ವಂತ ಕಟ್ಟಡವಿಲ್ಲದೇ, ಮೂಲ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಾ ಸಾಗಿರುವುದು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಬೇಜವಾಬ್ದಾರಿಗೆ ಹಿಡಿದ ಕೈಗನ್ನಡಿಯಾಗಿದೆ.
ಮೂರು ಬಾರಿ ಸ್ಥಳಾಂತರ:2018ರಲ್ಲಿಪಟ್ಟಣದ ಹೊಸಪೇಟೆ ಬಡಾವಣೆಯ ರಾಜೀವ ನಗರದಲ್ಲಿನ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯನ್ನು ಆರಂಭಿಸಲಾಯಿತು. ನಂತರ ಪಟ್ಟಣದ ಚಿಕ್ಕಪೇಟೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ಸ್ಥಳಾಂತರಿಸಲಾಯಿತು. ಪ್ರಸ್ತುತ ಖಾಸಗಿ ಬಸ್ ನಿಲ್ದಾಣ ಸಮೀಪದ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯವರು ನೀಡಿದ ಎರಡು ಕೊಠಡಿಗಳಲ್ಲಿ ಶಾಲೆ ನಡೆಯುತ್ತಿದೆ.
ಆಸನದ ಕೊರತೆ: ಪ್ರಸ್ತುತ ಶಾಲೆಯಲ್ಲಿ 6ರಿಂದ 10ನೇ ತರಗತಿವರೆಗೆ 23 ವಿದ್ಯಾರ್ಥಿಗಳು ಹಾಗೂ 54 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 77 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಎಸ್ಸೆಸ್ಸೆಲ್ಸಿ ತರಗತಿಯಲ್ಲಿ 24 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಸೌಲಭ್ಯಗಳ ಕೊರತೆಯ ನಡುವೆಯೇ ಶೇ. 100ರ ಫಲಿತಾಂಶ ನೀಡುವ ಹೊಣೆ ಶಿಕ್ಷಕರದ್ದಾಗಿದೆ.
ಮಾತ್ರವಲ್ಲದೇ ಒಬ್ಬರು ಪ್ರಭಾರ ಮುಖ್ಯ ಶಿಕ್ಷಕರಿದ್ದು, 6 ಮಂದಿ ಅತಿಥಿ ಶಿಕ್ಷಕರ ಮೂಲಕ ಪಾಠ - ಪ್ರವಚನಗಳು ನಡೆಯುತ್ತಿದೆ. ಇರುವ ಎರಡು ಕೊಠಡಿಯಲ್ಲಿ ಎರಡೆರಡು ತರಗತಿ ನಡೆಯುತ್ತಿದೆ. ಮತ್ತೊಂದಡೆ ಒಂದೇ ಕೊಠಡಿಯಲ್ಲಿ ಎರಡು ತರಗತಿಯ ಜೊತೆಗೆ ಮುಖ್ಯ ಶಿಕ್ಷಕರ ಕಚೇರಿಯೂ ಕಾರ್ಯನಿರ್ವಹಿಸುತ್ತಿದೆ. ಉಳಿದಂತೆ 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಯ ಕಾರಿಡಾರ್ ಗತಿಯಾಗಿದೆ.
ಮಾದರಿಯಾಗದ ಶಾಲೆ: ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಗೆ ಸ್ಥಳೀಯ ಶಾಸಕ ಎಸ್ ಕುಮಾರ್ ಬಂಗಾರಪ್ಪ ಅವರೇ ಅಧ್ಯಕ್ಷರಾಗಿದ್ದು, ಜಿಲ್ಲೆಯಲ್ಲಿ ಮಾದರಿ ಶಾಲೆಯನ್ನಾಗಿಸುವ ನಿಟ್ಟಿನಲ್ಲಿ ಸಾಕಷ್ಟು ಅವಕಾಶವಿತ್ತು. ಆದರೆ, ಜಿಲ್ಲೆಯಲ್ಲಿಯೇ ಮಾದರಿಯಾಗದ ಶಾಲೆ ಎನ್ನುವ ಅಪಖ್ಯಾತಿಗೆ ಒಳಗಾಗುವಂತಾಗಿದೆ.