ಶಿವಮೊಗ್ಗ: ಭಾರತೀಯ ಪತ್ರಿಕೋದ್ಯಮ ಇಂದು ಸಂಕಷ್ಟದಲ್ಲಿದೆ. ಪತ್ರಿಕಾ ಸ್ವಾತಂತ್ರ್ಯ ಸಂಕಷ್ಟದಲ್ಲಿದೆ. ಪತ್ರಕರ್ತರ ಮೇಲೆ ವಿವಿಧ ಕ್ಷುಲ್ಲಕ ಕಾರಣಗಳಿಗೆ ಮೊಕದ್ದಮೆಗಳನ್ನು ದಾಖಲು ಮಾಡಲಾಗುತ್ತಿದೆ. ಅಲ್ಲದೇ ನೋಟಿಸ್ ನೀಡದೆ ಬಂಧಿಸಲಾಗುತ್ತಿದೆ ಹಾಗೂ ಬೆದರಿಸಲಾಗುತ್ತಿದೆ ಎಂದು ರೇಮನ್ ಮಾಗ್ಸಸೆ ಪ್ರಶಸ್ತಿ ವಿಜೇತ ಅಭಿವೃದ್ಧಿ ಪತ್ರಕರ್ತ ಪಿ. ಸಾಯಿನಾಥ್ ಆತಂಕ ವ್ಯಕ್ತಪಡಿಸಿದರು.
ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಇಂಗ್ಲಿಷ್ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಏರ್ಪಡಿಸಿದ್ದ, ಡಾ. ಶಾಂತಿನಾಥ ದೇಸಾಯಿ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 200 ವರ್ಷಗಳ ಭಾರತೀಯ ಪತ್ರಿಕೋದ್ಯಮದ ಪ್ರಸಕ್ತ ಸ್ಥಿತಿಗತಿಯ ಬಗ್ಗೆ ಉಪನ್ಯಾಸ ನೀಡಿದರು.
ಭಾರತದಲ್ಲಿ ಮಾಧ್ಯಮಗಳನ್ನು ನಿಯಂತ್ರಿಸಲು 52 ಕಾಯ್ದೆಗಳು ಈಗಾಗಲೇ ಅಸ್ತಿತ್ವದಲ್ಲಿತ್ತು. ಇತ್ತೀಚೆಗೆ ಸಾಂಕ್ರಾಮಿಕ ರೋಗಗಳ ತಡೆ ಕಾಯಿದೆ ಮತ್ತು ವಿಪತ್ತು ನಿರ್ವಹಣೆ ಕುರಿತ ಕಾಯಿದೆಗಳನ್ನು ಪತ್ರಕರ್ತರ ಮೇಲೆ ದಾಖಲಿಸಿದ್ದು, ಪ್ರಸ್ತುತ ಅವುಗಳ ಸಂಖ್ಯೆ 62 ರಷ್ಟಿದೆ. ಕೋವಿಡ್ ಕಾಲದಲ್ಲಿ ಉತ್ತರಪ್ರದೇಶದ ಗಂಗಾ ನದಿಯಲ್ಲಿ ಹೆಣಗಳು ತೇಲಿದ ವರದಿ ನೀಡಿದ ಮಾಧ್ಯಮಗಳಿಗೆ ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳು ಜಾಹೀರಾತು ನೀಡುವುದನ್ನು ನಿಲ್ಲಿಸಿದವು. ಆ ಮೂಲಕ ಅವುಗಳಿಗೆ ಮೂಗುದಾರ ಹಾಕಲಾಯಿತು.