ಶಿವಮೊಗ್ಗ: ಭಾರಿ ಕುತೂಹಲ ಮೂಡಿಸಿದ್ದ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಗೆಲುವಾಗಿದೆ. ಪ್ರಭಾರ ಅಧ್ಯಕ್ಷರಾಗಿ ಹೆಚ್.ಎಲ್. ಷಡಾಕ್ಷರಿ ಆಯ್ಕೆಯಾಗಿದ್ದಾರೆ. ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ ಅವರ ವಿರುದ್ಧ ಇಂದು ಡಿಸಿಸಿ ಬ್ಯಾಂಕ್ ನಿರ್ದೇಶಕರು ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ನಿರ್ಣಯವನ್ನು ಮತಕ್ಕೆ ಹಾಕಿದಾಗ, 13 ಮಂದಿ ಮತದಾನದಲ್ಲಿ ಭಾಗವಹಿಸಿದ್ದರು. ಒಬ್ಬರು ಮುಚ್ಚಿದ ಲಕೋಟೆಯಲ್ಲಿ ಮತ ನೀಡಿದರು.
ಅವಿಶ್ವಾಸ ನಿರ್ಣಯದ ಪರ 9 ಮತಗಳು ಹಾಗೂ ಅಧ್ಯಕ್ಷರ ಪರ 3 ಮತಗಳು ಚಲಾಯಿಸಲ್ಪಟ್ಟವು. ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ಇರಲಿಲ್ಲ. ಅಧ್ಯಕ್ಷರ ಪರವಾಗಿ ಬಿ.ಡಿ. ಭೂಕಾಂತ್, ಅಗಡಿ ಅಶೋಕ್ ಮತ್ತು ಅಧ್ಯಕ್ಷ ಚನ್ನವೀರಪ್ಪ ಮತ ಚಲಾಯಿಸಿದ್ದರು. ಅವಿಶ್ವಾಸ ನಿರ್ಣಯದ ಪರವಾಗಿ ಹೆಚ್.ಎಲ್. ಷಡಾಕ್ಷರಿ, ಹೆಚ್.ಎನ್. ವಿಜಯದೇವ್. ದುಗ್ಗಪ್ಪಗೌಡ, ವೆಂಕಟೇಶ್, ಎಸ್.ಪಿ. ದಿನೇಶ್, ಯೋಗೀಶ್, ಶ್ರೀಪಾದ ರಾವ್ ನಿಸರಾಣಿ, ಪರಮೇಶ್ ಮತ ಚಲಾಯಿಸಿದರು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಎಲ್. ಷಡಾಕ್ಷರಿ ಪ್ರಭಾರ ಅಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ವೆಂಕಟಾಚಲಪತಿ ಕಾರ್ಯನಿರ್ವಹಿಸಿದ್ದರು.
ಪ್ರಭಾರ ಅಧ್ಯಕ್ಷರಾಗಿ ಆಯ್ಕೆಯಾದ ಷಡಾಕ್ಷರಿರವರನ್ನು ಇತರ ನಿರ್ದೇಶಕರು ಅಭಿನಂದಿಸಿದರು. ಈ ವೇಳೆ, ಡಿಸಿಸಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ಸೇರಿದಂತೆ ಇತರರು ಅಭಿನಂದಿಸಿದರು. ಡಿಸಿಸಿ ಬ್ಯಾಂಕ್ನಲ್ಲಿ ಹಾಲಿ ಅಧ್ಯಕ್ಷರ ವಿರುದ್ದ ಅವಿಶ್ವಾಸ ನಿರ್ಣಯವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರು, ಶಾಸಕರಾದ ಸಂಗಮೇಶ್ ಹಾಗೂ ಗೋಪಾಲಕೃಷ್ಣ ಬೇಳೂರು ಅವರ ನೇತೃತ್ವದಲ್ಲಿ ನಡೆಸಲಾಯಿತು.
ರೈತರಿಗಾಗಿ ಕೆಲಸ ಮಾಡುತ್ತೇನೆ- ಷಡಾಕ್ಷರಿ:ನಮ್ಮ ಅವಿಶ್ವಾಸ ನಿರ್ಣಯಕ್ಕೆ ಶ್ರೀಪಾದ ನಿಸರಾಣಿ ಹಾಗೂ ಯೋಗೀಶ್ ಅವರು ಸಹಕಾರ ನೀಡಿದರು. ಇದರಿಂದ ಇಂದು ನಮಗೆ ಜಯ ಲಭಿಸಿದೆ. ಹಾಲಿ ಅಧ್ಯಕ್ಷ ಚನ್ನವೀರಪ್ಪನವರಿಗೆ ಬಹುಮತ ಇರಲಿಲ್ಲ. ಅವರು ಗೌರವಯುತವಾಗಿ ರಾಜೀನಾಮೆ ನೀಡಬೇಕಿತ್ತು. ಆದರೆ, ಅವರು ರಾಜೀನಾಮೆ ನೀಡದ ಕಾರಣ ಅವಿಶ್ವಾಸ ನಿರ್ಣಯಕ್ಕೆ ಹಾಕಬೇಕಾಯಿತು. ನಮಗೆ ಜಯ ಲಭಿಸಿದೆ. ನಾನು ಪ್ರಭಾರ ಅಧ್ಯಕ್ಷನಾಗಿ ಎಲ್ಲಿವರೆಗೂ ಇರುತ್ತಾನೆಯೋ ಅಲ್ಲಿಯ ವರೆಗೆ ರೈತರಿಗಾಗಿ ಕೆಲಸ ಮಾಡುತ್ತೆನೆ ಎಂದು ಡಿಸಿಸಿ ಬ್ಯಾಂಕಿನ ಪ್ರಭಾರಿ ಅಧ್ಯಕ್ಷರಾದ ಷಡಾಕ್ಷರಿ ತಿಳಿಸಿದರು.