ಶಿವಮೊಗ್ಗ: ಅಭಿವೃದ್ಧಿಗೆ ಜನ ಮನ್ನಣೆ ನೀಡುತ್ತಾರೆ ಎಂಬುದಕ್ಕೆ ತೀರ್ಥಹಳ್ಳಿಯಲ್ಲಿ ಇಂದು ನೆರೆದಿರುವ ಜನರೇ ಸಾಕ್ಷಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀರ್ಥಹಳ್ಳಿಯಲ್ಲಿ ನಡೆದ 618 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೇರವೇರಿಸುವ ಕಾರ್ಯಕ್ರಮದಲ್ಲಿ ನೆರೆದಿದ್ದ ಜನಸ್ತೋಮ ಕಂಡು ಮಾತನಾಡಿದರು.
ತೀರ್ಥಹಳ್ಳಿಯ ಸರ್ಕಾರಿ ಪಿಯು ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತೀರ್ಥಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ 618 ಕೋಟಿ ರೂ ವೆಚ್ಚದ ಕಾಮಗಾರಿಯನ್ನು ಉದ್ಘಾಟಿಸಿದ್ದು ಸಂತೋಷವಾಗಿದೆ. ನಿಮ್ಮನ್ನು ನೋಡಿ ನನಗ ಬಹಳ ಸಂತೋಷವಾಗಿದೆ. ಅಭಿವೃದ್ಧಿಗೆ ಜನ ಮನ್ನಣೆ ನೀಡುತ್ತಾರೆ ಎಂಬುದಕ್ಕೆ ಇಲ್ಲಿ ನೆರೆದಿರುವ ಜನ ಸಂಖ್ಯೆಯೇ ಸಾಕ್ಷಿ ಎಂದರು.
ಹಿಂದೆ 600 ಕೋಟಿ ಅಭಿವೃದ್ಧಿಯ ಶಂಕುಸ್ಥಾಪನೆ ಇದೇ ತೀರ್ಥಹಳ್ಳಿಯಲ್ಲಿ ನಡೆದಿತ್ತು. ಆದರೆ ಅದು ಎಲ್ಲಿ ಹೋಯ್ತು ಏನಾಯ್ತು ಅಂತ ಗೂತ್ತಾಗಲಿಲ್ಲ. ಈಗ ಆದ ಶಂಕುಸ್ಥಾಪನೆಗೆ ಎಲ್ಲಾ ರೀತಿಯ ಅನುಮೋದನೆಯನ್ನು ನೀಡಲಾಗಿದೆ. ಮಲೆನಾಡಿನ ಹಲವು ಅಭಿವೃದ್ಧಿಯ ಜೊತೆಗೆ ಅನೇಕ ಸಮಸ್ಯೆಗಳ ಬಗ್ಗೆ ನಮ್ಮ ನಾಯಕ ಯಡಿಯೂರಪ್ಪನವರ ಜೊತೆ ಚರ್ಚಿಸಿ ಪರಿಹರಿಸಲಾಗುವುದು ಎಂದು ಸಿಎಂ ಭರವಸೆ ನೀಡಿದರು.
ಶರಾವತಿ ಸಂತ್ರಸ್ತರಿಗೆ ಡಿಸೆಂಬರ್ ಒಳಗೆ ಪರಿಹಾರ :ಶರಾವತಿ ಸಂತ್ರಸ್ತರ ಸಮಸ್ಯೆಯ ಕುರಿತು ಯಡಿಯೂರಪ್ಪ ಅವರು ತಮ್ಮ ಮನೆಗೆ ಕರೆಯಿಸಿ, ಸಮಸ್ಯೆ ಪರಿಹರಿಸಬೇಕೆಂದು ಸೂಚನೆ ನೀಡಿದರು. ಅಧಿಕಾರದಲ್ಲಿದ್ದಾಗ ಸೂಕ್ತ ರೀತಿಯಲ್ಲಿ ಹಕ್ಕು ಪತ್ರ ವಿತರಿಸಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಕಾಂಗ್ರೆಸ್ ಅದನ್ನು ಜೀವಂತ ಸಮಸ್ಯೆಯಾಗಿಸುವ ರೀತಿ ಮಾಡಿತ್ತು. ಆ ಕಾರಣ ಇದಕ್ಕೆ ಶಾಶ್ವತ ಪರಿಹಾರ ನೀಡುವ ಯೋಜನೆ ಮಾಡುತ್ತೇವೆ. ಈ ಸಮಸ್ಯೆಗೆ ಡಿಸಂಬರ್ ಒಳಗೆ ಪರಿಹರಿಸುತ್ತೇವೆ. ಅಂದು ಸರಿಯಾಗಿ ಕ್ರಮ ಜರುಗಿಸಿದ್ದರೆ, ಇಂದು ಪಾದಯಾತ್ರೆಯೇ ಬೇಡವಾಗಿತ್ತು ಎಂದು ನಾಳೆಯ ಪಾದಯಾತ್ರೆಯ ಕುರಿತು ಕುಟುಕಿದರು.
ಅಡಕೆ ಎಲೆಚುಕ್ಕಿ ರೋಗಕ್ಕೆ ನಮ್ಮ ಅಧಿಕಾರಿಗಳಿಗ ಸೂಚನೆ ನೀಡಿದ್ದೇನೆ. ಡೀಮ್ಡ್ ಫಾರೆಸ್ಟ್ ಅನ್ನು ಬಿಡುಗಡೆ ಮಾಡಿದ್ದೇವೆ. ಇದರಲ್ಲಿ ತೀರ್ಥಹಳ್ಳಿಯದ್ದೇವೆ ಬಹುಪಾಲ ಹೊಂದಿದೆ ಎಂದರು.
ಜ್ಞಾನೇಂದ್ರ ಅರವಗೆ ಜ್ಞಾನ ಇದೆ, ಅದೇ ರೀತಿ ಇಂದ್ರನಷ್ಟೇ ಶಕ್ತಿ ಇದೆ:ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಜ್ಞಾನವೂ ಇದೇ, ಅದೇ ರೀತಿ ಶಕ್ತಿಯೂ ಇದೆ ಎಂದು ಸಿಎಂ ಹೊಗಳಿದರು. ಜ್ಞಾನೇಂದ್ರ ಅವರಿಗೆ ತೀರ್ಥಹಳ್ಳಿ ಅಭಿವೃದ್ಧಿಯ ಬಗ್ಗೆ ತಿಳಿದಿದೆ. ಇದರಿಂದ ಮುಂದಿನ ಚುನಾವಣೆಯಲ್ಲಿ ಅವರಿಗೆ ಆಶೀರ್ವಾದ ಮಾಡಿ ಎಂದರು.