ಕರ್ನಾಟಕ

karnataka

ETV Bharat / state

ವಿಚಾರಣಾ ನ್ಯಾಯಾಲಯಗಳಿಗೆ ಜೀವ ಇರುವವರೆಗೂ ಶಿಕ್ಷೆ ನೀಡುವ ಅಧಿಕಾರವಿಲ್ಲ: ಹೈಕೋರ್ಟ್ - life imprisonment case

ಅಪರಾಧಿಗೆ ಜೀವವಿರುವವರೆಗೂ ಜೈಲು ಶಿಕ್ಷೆ ನೀಡುವ ಅಧಿಕಾರವು ಹೈಕೋರ್ಟ್​ ಹಾಗೂ ಸುಪ್ರೀಂಕೋರ್ಟ್​ಗೆ ಮಾತ್ರ ಇದೆ ಎಂದು ಕರ್ನಾಟಕ ಹೈಕೋರ್ಟ್​ ಹೇಳಿದೆ.

imprisonment-till-last-breath-can-be-imposed-only-by-high-court-or-supreme-court-karnataka-high-court
ವಿಚಾರಣಾ ನ್ಯಾಯಾಲಯಗಳಿಗೆ ಜೀವವಿರುವವರೆಗೂ ಶಿಕ್ಷೆ ನೀಡುವ ಅಧಿಕಾರವಿಲ್ಲ : ಹೈಕೋರ್ಟ್

By

Published : Jul 22, 2023, 8:08 PM IST

ಬೆಂಗಳೂರು :ಕೊಲೆ ಪ್ರಕರಣವೊಂದರಲ್ಲಿ ಜೀವವಿರುವವರೆಗೂ ಜೈಲು ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಿದೆ. ಕೊಲೆ ಆರೋಪದಲ್ಲಿ ಜೀವವಿರುವರೆಗೂ ಜೈಲಿನಲ್ಲಿರುವ ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹಾಸನ ಜಿಲ್ಲೆಯ ದ್ಯಾವಪನಹಳ್ಳಿಯ ನಿವಾಸಿ ಹರೀಶ್​ ಮತ್ತು ಮೂರು ವರ್ಷ ಶಿಕ್ಷೆಗೆ ಗುರಿಯಾಗಿದ್ದ ಲೋಕೇಶ್​ ಎಂಬುವರು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಸೋಮಶೇಖರ್​ ಮತ್ತು ನ್ಯಾಯಮೂರ್ತಿ ಕೆ. ರಾಜೇಶ್​ ರೈ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಜೀವ ಇರುವವರೆಗೂ ಶಿಕ್ಷೆ ವಿಧಿಸುವ ಪ್ರಕರಣಗಳಲ್ಲಿ ಅತ್ಯಂತ ಕ್ರೂರ ಮತ್ತು ಅಪರೂಪದ ಕೃತ್ಯಗಳಾಗಿರಬೇಕು. ಜೊತೆಗೆ, ಕ್ರೈಂ​, ಕ್ರಿಮಿನಲ್​ ಮತ್ತು ಅತ್ಯಂತ ಅಪರೂಪದ ಕೃತ್ಯದ ಬಗ್ಗೆ ಪರೀಕ್ಷೆ ನಡೆಸಬೇಕು ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಈ ಪ್ರಕರಣದಲ್ಲಿ ಕ್ರೈಂ​ ಮತ್ತು ಕ್ರಿಮಿನಲ್​ ಪರೀಕ್ಷೆಗೆ ತೃಪ್ತಿಕರವಾಗಿದೆ. ಆದರೆ, ಅತ್ಯಂತ ಅಪರೂಪದ ಕೃತ್ಯ ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್​ ಸಾಕ್ಷ್ಯಾಧಾರಗಳನ್ನು ಒದಗಿಸಲು ವಿಫಲವಾಗಿದೆ ಎಂದು ಪೀಠ ತಿಳಿಸಿದೆ.

ಅಲ್ಲದೇ, ಕೇಂದ್ರ ಸರ್ಕಾರದ ವಿರುದ್ಧದ ವಿ.ಶ್ರೀಹರನ್​ ಅಲಿಯಾಸ್​ ಮುರುಗನ್​ ಮತ್ತಿತರರ ಪ್ರಕರಣದಲ್ಲಿ ಸುಪ್ರೀಂಕೋರ್ಟ್​ ನೀಡಿರುವ ತೀರ್ಪನ್ನು ಉಲ್ಲೇಖಿಸಿರುವ ಹೈಕೋರ್ಟ್, ಅಪರಾಧಿಯೊಬ್ಬರಿಗೆ ಜೀವವಿರುವರೆಗೂ ಶಿಕ್ಷೆ ನೀಡುವಂತಹ ವಿಶೇಷ ಆದೇಶವನ್ನು ಹೈಕೋರ್ಟ್​ ಹಾಗೂ ಸುಪ್ರೀಂಕೋರ್ಟ್ ಮಾತ್ರ ನೀಡಬಹುದಾಗಿದೆ. ಆದರೆ, ವಿಚಾರಣಾ ನ್ಯಾಯಾಲಯಕ್ಕೆ ಈ ರೀತಿಯ ಶಿಕ್ಷೆ ನೀಡುವ ಅಧಿಕಾರವಿಲ್ಲ ಎಂದು ಹೇಳಿದೆ.

ಪ್ರಕರಣದ ಮೊದಲ ಆರೋಪಿ ಹರೀಶ್​ಗೆ ಶಿಕ್ಷೆ ನೀಡಿರುವ ಕ್ರಮ ಎತ್ತಿಹಿಡಿದಿರುವ ಹೈಕೋರ್ಟ್, ಆದರೆ, ಸುಪ್ರೀಂಕೋರ್ಟ್ ಆದೇಶದಂತೆ ಆರೋಪಿಗೆ ವಿಚಾರಣಾ ನ್ಯಾಯಾಲಯ ಜೀವವಿವರೆಗೂ ಶಿಕ್ಷೇ ನೀಡಿರುವುದು ಕಾನೂನು ಪ್ರಕಾರ ಸರಿಯಾದ ಕ್ರಮವಲ್ಲ. ಅಲ್ಲದೆ, ಈ ರೀತಿಯ ಪ್ರಕರಣಗಳಲ್ಲಿ ಸೆಷನ್ಸ್​ ನ್ಯಾಯಾಲಯ ಜೀವವಿರುವರೆಗೂ ಶಿಕ್ಷೆ ನೀಡುವ ಅಧಿಕಾರವನ್ನು ಚಲಾಯಿಸಲು ಅವಕಾಶವಿಲ್ಲ ಎಂದು ಪೀಠ ತಿಳಿಸಿದೆ.

ಜೊತೆಗೆ ಮೂರನೇ ಆರೋಪಿ ಲೋಕೇಶ್​ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವುದು ಮತ್ತು ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸುವಲ್ಲಿ ತನಿಖಾಧಿಕಾರಿಗಳು ವಿಫಲರಾಗಿದ್ದಾರೆ ಎಂದು ಅಭಿಪ್ರಾಯಪಟ್ಟು ಆರೋಪ ಮುಕ್ತಗೊಳಿಸಿದೆ. ಅಲ್ಲದೆ, ಮೂರನೇ ಆರೋಪಿಯಾಗಿರುವ ಲೋಕೇಶ್​ ಅವರಿಗೆ ಒಂದನೇ ಆರೋಪಿ ಹರೀಶ್​ ಹೇಳಿಕೆಯನ್ನು ಪರಿಗಣಿಸಿ ವಿಚಾರಣಾ ನ್ಯಾಯಾಲಯ ಶಿಕ್ಷೆಗೆ ಗುರಿಪಡಿಸಲಾಗಿದೆ. ಆದರೆ, ಆರೋಪಿಯ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸದಿದ್ದರೂ ಮತ್ತೊಬ್ಬ ಆರೋಪಿಯ ಹೇಳಿಕೆಯನ್ನು ಮಾತ್ರ ಪರಿಗಣಿಸಿ ಶಿಕ್ಷೆ ನೀಡುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಪೀಠ ಹೇಳಿದೆ.

ಹರೀಶ್​​ಗೆ ನೀಡಿರುವ ನೀಡಿರುವ ಜಾಮೀನು ರದ್ದಾಗಲಿದ್ದು, ಮುಂದಿನ ಎರಡು ವಾರಗಳಲ್ಲಿ ಶಿಕ್ಷೆ ಅನುಭವಿಸುವುದಕ್ಕಾಗಿ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ:ಹಳೇಬೀಡು ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಡಿ.ಆರ್. ಕುಮಾರ್ ಎಂಬುವರು ನಾಪತ್ತೆ ಆದ ಬಗ್ಗೆ ಪ್ರಕರಣ ದಾಖಲಿಸಿರುತ್ತಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ ಪೊಲೀಸರಿಗೆ ಕುಮಾರ್​ ಪತ್ನಿ ರಾಧಾ ಎಂಬುವರೊಂದಿಗೆ ಆರೋಪಿ ಹರೀಶ್​ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಇದಕ್ಕೆ ಅಡ್ಡಿಯಾಗುತ್ತಿದ್ದ ಕಾರಣ ಹರೀಶ್,​ 2012ರ ಫೆಬ್ರವರಿ 16ರಂದು ಹಾಸನ ಜಿಲ್ಲೆಯ ಗ್ರಾಮವೊಂದರಲ್ಲಿ ಗದ್ದೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಕುಮಾರ್​ಗೆ ರಾಡ್​ನಿಂದ ತಲೆ ಮತ್ತು ಎದೆ ಭಾಗಗಳಿಗೆ ಹೊಡೆದು ಕೊಲೆ ಮಾಡಿದ್ದ.

ಇದಾದ ಬಳಿಕ ಹರೀಶ್​ ತನ್ನ ಸಹೋದರ ಲೋಕೇಶ್​ ನೆರವಿನೊಂದಿಗೆ ಮೃತದೇಹವನ್ನು ಸರಕು ಸಾಗಣೆ ಆಟೋ ರಿಕ್ಷಾದಲ್ಲಿ ತೆಗೆದುಕೊಂಡು ಬಂದು ಖಾಲಿ ಜಮೀನೊಂದರಲ್ಲಿ ಮಣ್ಣುಮಾಡಿದ್ದರು. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಹರೀಶ್​, ರಾಧಾ ಮತ್ತು ಲೋಕೇಶ್​ಗೆ 2017ರಲ್ಲಿ ಶಿಕ್ಷೆ ವಿಧಿಸಿ ಆದೇಶಿಸಿತ್ತು. ಹರೀಶ್​ಗೆ ಕೊಲೆ ಆಪರಾಧಕ್ಕೆ ಜೀವವಿರುವವರೆಗೂ ಶಿಕ್ಷೆ ಮತ್ತು 50 ಸಾವಿರ ರೂ.ಗಳ ದಂಡ ವಿಧಿಸಿತ್ತು.

ಅಲ್ಲದೆ, ಅಪರಾಧಿಕ ಒಳಸಂಚು ಮತ್ತು ಸಾಕ್ಷ ನಾಶ ಆರೋಪದಲ್ಲಿ 3 ಲಕ್ಷ ರೂ.ಗಳ ದಂಡ ವಿಧಿಸಲಾಗಿತ್ತು. ದಂಡದ ಮೊತ್ತವನ್ನು ಮೃತ ಡಿ.ಆರ್​. ಕುಮಾರ್​ ಮಕ್ಕಳಿಗೆ ನೀಡಬೇಕು ಎಂದು ಆದೇಶಿಸಲಾಗಿತ್ತು. ಅಲ್ಲದೆ, ಇದಕ್ಕೆ ಸಹಕರಿಸಿದ್ದ ಲೋಕೇಶ್​ಗೆ ಸಾಕ್ಷ್ಯ ನಾಶದ ಆರೋಪದಲ್ಲಿ ಮೂರು ವರ್ಷ ಶಿಕ್ಷೆ ವಿಧಿಸಿಸಲಾಗಿತ್ತು. ಇದನ್ನು ಪ್ರಶ್ನಿಸಿ ಹರೀಶ್​ ಮತ್ತು ಲೋಕೇಶ್​ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ:ಬೈಕ್ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ 1.58 ಕೋಟಿ ಪರಿಹಾರ..ಇದು ಕೇರಳದಲ್ಲಿ ಬೈಕ್ ಅಪಘಾತಕ್ಕೆ ನೀಡಲಾದ ಅತ್ಯಧಿಕ ಮೊತ್ತ!

ABOUT THE AUTHOR

...view details