ಶಿವಮೊಗ್ಗ : ರಾಜ್ಯದಲ್ಲಿ ಮಳೆ ಬಾರದೆ ಹೋದರೆ ಮೋಡ ಬಿತ್ತನೆ ಮಾಡುವ ಕುರಿತು ಚಿಂತಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಶಿವಮೊಗ್ಗ ಜಿಲ್ಲಾ ಪಂಚಾಯತ್ನ ನಜೀರ್ ಸಾಬ್ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲೆಯ ಕುಡಿಯುವ ನೀರು ಟಾಸ್ಕ್ ಫೋರ್ಸ್ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನೀರಿಲ್ಲದಂತಹ ಸಂದರ್ಭ ಸೃಷ್ಟಿ ಆಗಿಲ್ಲ. ಅಧಿಕಾರಿಗಳ ಮಾಹಿತಿ ಪ್ರಕಾರ ಈಗ ಇರುವ ನೀರು ಇನ್ನೂ 20 ದಿನಗಳವರೆಗೆ ಸಾಕಾಗುತ್ತದೆ. 20 ದಿನಗಳಲ್ಲಿ ಮಳೆಯಾದರೆ ನೀರಿನ ಅಭಾವ ಕಡಿಮೆಯಾಗಲಿದೆ ಎಂದರು.
ಬೇಗ ಮಳೆ ಬರುವ ವಾತಾವರಣ ಕಾಣಿಸುತ್ತಿದೆ. ಪ್ರತಿ ವರ್ಷ ಅತಿವೃಷ್ಟಿ, ಅನಾವೃಷ್ಟಿ ಎರಡೂ ಆಗುತ್ತದೆ. ಕುಡಿಯುವ ನೀರಿಗೆ ಆದ್ಯತೆ ಕೊಡಬೇಕು. ಶಿವಮೊಗ್ಗ ಜಿಲ್ಲೆಯಲ್ಲಿ 84 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಮೋಡ ಬಿತ್ತುವ ಯೋಜನೆಯ ಪ್ರಸ್ತಾಪ ಇದೆ. ಮಳೆ ಬರದಿದ್ದರೆ ಮೋಡ ಬಿತ್ತನೆ ಮಾಡುವ ಬಗ್ಗೆ ಚಿಂತನೆ ನಡೆಯುತ್ತದೆ ಎಂದು ಹೇಳಿದರು.
ಸಂಸದ ಬಿ.ವೈ.ರಾಘವೇಂದ್ರ ವಿರುದ್ಧ ವಾಗ್ದಾಳಿ: ಕಾಂಗ್ರೆಸ್ ಸರ್ಕಾರ ಬಂದಾಗ ಬರ ಬರುತ್ತದೆ ಎಂಬ ಸಂಸದ ರಾಘವೇಂದ್ರ ಅವರ ಹೇಳಿಕೆ ಪ್ರತಿಕ್ರಿಯಿಸಿ, ರಾಜ್ಯದ ಜನರು ಅದಕ್ಕೆ ಅವರಿಗೆ ಬರೆ ಹಾಕಿದ್ದಾರೆ. ಇದರಿಂದ ಅವರು ಕೇವಲ 67 ಸ್ಥಾನಗಳನ್ನು ಮಾತ್ರ ಪಡೆದಿದ್ದಾರೆ. ಕಳೆದ 10-12 ವರ್ಷಗಳಿಂದ ಬರೀ ವಿಮಾನ ನಿಲ್ದಾಣ ಅಂತಿದ್ದಾರೆ. ಮೊದಲು ವಿಮಾನ ತಂದು ನಿಲ್ಲಿಸಲು ಹೇಳಿ ಎಂದು ವಾಗ್ದಾಳಿ ನಡೆಸಿದರು.