ಬೆಂಗಳೂರು: ಶಿವಮೊಗ್ಗದಲ್ಲಿ ನಡೆದ ಯುವಕ ಹರ್ಷ ಕೊಲೆ ಪ್ರಕರಣ ಕುರಿತು ಗೃಹ ಸಚಿವರು ಸಲ್ಲಿಕೆ ಮಾಡಿರುವ ವರದಿ ಕುರಿತು ಪರಿಶೀಲಿಸಿ, ನಾಳೆ ಮಾಹಿತಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮನ್ನು ಭೇಟಿ ಮಾಡಿ ಶಿವಮೊಗ್ಗ ಘಟನೆ ಕುರಿತು ಸಮಗ್ರ ಮಾಹಿತಿ ನೀಡಿದ್ದಾರೆ. ಘಟನೆ ನಂತರದ ಬೆಳವಣಿಗೆ, ಕಾನೂನು ಸುವ್ಯವಸ್ಥೆ ಕಾಪಾಡಲು ಕೈಗೊಂಡ ಕ್ರಮಗಳ ಕುರಿತು ವಿವರ ಸಲ್ಲಿಸಿದ್ದಾರೆ. ಈ ಎಲ್ಲ ಮಾಹಿತಿಗಳ ಕುರಿತು ನಾಳೆ ಮಾಧ್ಯಮಗಳಿಗೆ ಮಾಹಿತಿ ನೀಡುತ್ತೇನೆ ಎಂದರು.
ಬಿಜೆಪಿ ಸೇರ್ಪಡೆ: ಬಿಜೆಪಿ ಕಚೇರಿಯಲ್ಲಿ ಸಿಎಂ ಬೊಮ್ಮಾಯಿ, ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟಿಲ್, ವಿಧಾನ ಪರಿಷತ್ ಸದಸ್ಯ ಸಿಪಿ.ಯೋಗಿಶ್ವರ್ ಸಮ್ಮುಖದಲ್ಲಿ ಚನ್ನಪಟ್ಟಣ ಹಾಗೂ ರಾಮನಗರದ ಜೆಡಿಎಸ್ ಮುಂಖಡ ಲಿಂಗೇಶ್ ನೂರಾರು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾದರು. ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ್ ನಾರಾಯಣ್ ಗೈರು ಎದ್ದು ಕಾಣುತ್ತಿತ್ತು.
ಇದನ್ನೂ ಓದಿ:ಕೊಲೆ ಆರೋಪಿಗಳಲ್ಲಿ ಮೂವರು ಶಿವಮೊಗ್ಗದವರು, ಇಬ್ಬರ ಬಗ್ಗೆ ಶೋಧ ನಡೆಯುತ್ತಿದೆ : ಗೃಹ ಸಚಿವ ಆರಗ
ಪದೇ ಪದೆ ಆಡಳಿತಾರೂಢ ಬಿಜೆಪಿಯಿಂದ ಕೋವಿಡ್ ನಿಯಮ ಉಲ್ಲಂಘನೆ ಮಾಡುತ್ತಿದ್ದು, ಇಂದೂ ಕೂಡ ಉಲ್ಲಂಘನೆ ಮಾಡಲಾಯಿತು. ಯೋಗೇಶ್ವರ್ ಜೊತೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಬಿಜೆಪಿ ಕಚೇರಿಗೆ ಆಗಮಿಸಿದರು. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿಯಮ ಉಲ್ಲಂಘಿಸಿದರು. ಒಳಾಂಗಣದಲ್ಲಿ 300 ಜನಕ್ಕೆ ಸೀಮಿತ ಅವಕಾಶ ಎನ್ನುವ ನಿಯಮವನ್ನೂ ಮುರಿದು ಸಭೆ ನಡೆಸಲಾಯಿತು.