ಶಿವಮೊಗ್ಗ: ಆಜಾನ್ ಕೂಗುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಎಷ್ಟು ತೊಂದರೆ ಆಗುತ್ತಿದೆ ಎಂದು ಪೋಷಕರಿಗೆ ಗೊತ್ತು ಹಾಗೂ ಆಸ್ಪತ್ರೆಯಲ್ಲಿ ಇರುವ ರೋಗಿಗಳಿಗೆ ಗೊತ್ತು. ಇಂತಹ ವಿಷಯಗಳ ಕುರಿತು ಬಹಿರಂಗವಾಗಿ ಹೇಳಲು ನಾನು ಹಿಂದೆ ಮುಂದೆ ನೋಡಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಇತ್ತೀಚೆಗೆ ಆಜಾನ್ ಕುರಿತು ನೀಡಿದ್ದ ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ನಗರದಲ್ಲಿಂದು ಇದೇ ವಿಷಯವಾಗಿ ಸುದ್ದಿಗಾರರೂಂದಿಗೆ ಮಾತನಾಡಿದ ಅವರು, ಬೇರೆಯವರಿಗೆ ತೊಂದರೆ ಆಗದ ರೀತಿಯಲ್ಲಿ ಆಜಾನ್ ಕೂಗಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಮೈಕ್ ಬಳಸುವುದು ನಿಷೇಧ ಎಂದು ಸುಪ್ರೀಂ ಕೋರ್ಟ್ ತೀರ್ಪು ಇದ್ದರೂ ಕೂಡಾ ಈ ರೀತಿ ಮಾಡುತ್ತಾರೆ. ಜನಸಾಮಾನ್ಯರ ಭಾವನೆಗಳನ್ನು ನಾನು ಹೇಳುವವನು. ನನ್ನ ವಿರುದ್ಧ ಎಷ್ಟು ಪ್ರತಿಭಟನೆ ಮಾಡಿದರೂ ನಾನು ಎದುರಿಸುತ್ತೇನೆ ಎಂದು ಹೇಳಿದರು.
ಮೂಡಿಗೆರೆ ಶಾಸಕ ಕುಮಾರಸ್ವಾಮಿ ವಿರುದ್ಧ ಕಾರ್ಯಕರ್ತರ ಪ್ರತಿಭಟನೆ:ಕೆಲವರಿಗೆ ಆ ಶಾಸಕ ಮಾಡಿರುವ ಕೆಲಸ ಸಮಾಧಾನ ಇಲ್ಲ ಎಂದು ಅನಿಸಿರಬಹುದು. ಪ್ರಜಾಪ್ರಭುತ್ವದಲ್ಲಿ ಈ ರೀತಿ ಪ್ರತಿಭಟನೆ ಮಾಡಲು ಅವಕಾಶ ಇರುತ್ತದೆ. ಪ್ರತಿಭಟನೆ ಮಾಡಲು ಅವಕಾಶ ಇಲ್ಲ ಅಂದರೆ ಅದನ್ನು ಪ್ರಜಾಪ್ರಭುತ್ವ ಎಂದು ಕರೆಯುವುದಿಲ್ಲ. ಪ್ರತಿಭಟನೆ ಮಾಡೋದು ಸರಿನೋ ತಪ್ಪೋ ಎಂದು ಯಾರು ಪ್ರತಿಭಟನೆ ಮಾಡಿದ್ದಾರೋ ಅವರು ಯೋಚನೆ ಮಾಡಬೇಕು ಎಂದರು.
ಸರಿ ಎನ್ನುವುದಾದರೆ ಅದನ್ನು ಎದುರಿಸಬೇಕು. ಪ್ರತಿಭಟನೆ ಸರಿಯಲ್ಲ ಎನ್ನುವುದಾದರೆ ಅದನ್ನು ತಿದ್ದಿಕೊಳ್ಳಬೇಕು. ಕಾರ್ಯಕರ್ತರ ಜೊತೆ ಕುಳಿತುಕೊಂಡು ಸಮಾಧಾನ ಮಾಡುವ ದಿಕ್ಕಿನಲ್ಲಿ ಪ್ರಯತ್ನ ಮಾಡಬೇಕು. ಇಲ್ಲದಿದ್ದರೆ ಇದು ಮುಂದುವರಿದುಕೊಂಡು ಹೋಗುತ್ತದೆ. ಇನ್ನೂ ಕೆಲವರು ಬೇಕು ಅಂತಾನೇ ಪ್ರತಿಭಟನೆ ಮಾಡುತ್ತಾರೆ. ಇಷ್ಟ ಬಂದಾಗೆ ಪ್ರತಿಭಟನೆ ಮಾಡಿದರೆ ಅವರು ಹೇಳಿದ ಹಾಗೆ ಕೇಳುವುದಕ್ಕೆ ಆಗುತ್ತದಾ ಎಂದು ಈಶ್ವರಪ್ಪ ಪ್ರಶ್ನಿಸಿದರು.