ಕರ್ನಾಟಕ

karnataka

ನನಗೆ ರಾಜಕಾರಣದ ತರಬೇತಿ ನೀಡಿದ್ದೇ ಪದವಿ ಕಾಲೇಜು: ಆರಗ ಜ್ಞಾನೇಂದ್ರ

By

Published : Oct 18, 2021, 11:03 AM IST

ನನಗೆ ಮೊದಲು ರಾಜಕಾರಣದ ತರಬೇತಿ ನೀಡಿದ್ದೇ ಎಟಿಎನ್​ಸಿಸಿ ಕಾಲೇಜು, ಪದವಿ ಓದುವ ಸಮಯದಲ್ಲೇ ಕಾಲೇಜು ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಚುನಾವಣಾ ಪ್ರಚಾರ ಮಾಡಿ ಗೆದ್ದಿದ್ದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹಳೇ ದಿನಗಳನ್ನು ಮೆಲುಕು ಹಾಕಿದರು.

Arrag jnanendra
Arrag jnanendra

ಶಿವಮೊಗ್ಗ: ರಾಜಕಾರಣದ ಕುರಿತು ನನಗೆ ಮೊದಲು ತರಬೇತಿ ನೀಡಿದ್ದೇ ನಾನು ಕಲಿತ ಪದವಿ ಕಾಲೇಜು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ವಿದ್ಯಾರ್ಥಿ ಜೀವನವನ್ನು ನೆನಪಿಸಿಕೊಂಡರು.

ನಗರದ ಎಟಿಎನ್​ಸಿಸಿ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿಗಳಿಂದ ಹಾಗೂ ಕಾಲೇಜು ಆಡಳಿತ ಮಂಡಳಿಯಿಂದ ಗೌರವ ಸ್ವೀಕರಿಸಿ ಮಾತನಾಡಿದ ಅವರು, ನನಗೆ ಮೊದಲು ರಾಜಕಾರಣಕ್ಕೆ ತರಬೇತಿ ನೀಡಿದ್ದೇ ಎಟಿಎನ್​ಸಿಸಿ ಕಾಲೇಜು, ಪದವಿ ಓದುವ ಸಮಯದಲ್ಲೇ ಕಾಲೇಜು ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಚುನಾವಣಾ ಪ್ರಚಾರ ಮಾಡಿ ಗೆದ್ದಿದ್ದೆ ಎಂದರು.

ಎಟಿಎನ್​ಸಿಸಿ ಕಾಲೇಜು ಆಡಳಿತ ಮಂಡಳಿಯಿಂದ ಗೌರವ ಸ್ವೀಕರಿಸಿ ಮಾತನಾಡಿದ ಆರಗ ಜ್ಞಾನೇಂದ್ರ

ನಾನು ಓದಿನಲ್ಲಿ ಬಹಳ ಹಿಂದೆ ಇದ್ದೆ. ಬುದ್ಧಿವಂತ ವಿದ್ಯಾರ್ಥಿ ಅಲ್ಲ. ಆದರೆ ಇತರೆ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದೆ. ಕಾಲೇಜು ವಿದ್ಯಾರ್ಥಿಗಳ ಸಂಘದ ನಾಯಕನಾಗಿ ಆಯ್ಕೆಯಾಗಿದ್ದೆ. ಆ ಸಂದರ್ಭದಲ್ಲಿ ನನ್ನ ವಿರೋಧಿಗಳು ಅನೇಕ ರೀತಿಯ ತಂತ್ರ ಹೂಡಿ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದರು. ಆದರೆ ಅಂದಿನ ಸ್ನೇಹಿತರು ನನ್ನನ್ನು ನಾಯಕನಾಗಿ ಮುಂದುವರೆಯುವಂತೆ ಸಹಕರಿಸಿದ್ದರು. ವಿದ್ಯಾರ್ಥಿ ಜೀವನದ ಕೊನೆಯ ದಿನಗಳಲ್ಲಿ ತುರ್ತುಪರಿಸ್ಥಿತಿಯಲ್ಲಿ ಜೈಲು ಪಾಲಾಗಿದ್ದೆ. ಆಗ ನನಗೆ ಜೈಲಿನ ಸಮಸ್ಯೆಗಳು ಅರಿವಾಯಿತು ಎಂದು ತಮ್ಮ ಕಾಲೇಜು ದಿನಗಳನ್ನು ಮೆಲುಕು ಹಾಕಿದರು.

ಒಟ್ಟು ಐದು ಬಾರಿ ಸೋತು ನಾಲ್ಕು ಬಾರಿ ತೀರ್ಥಹಳ್ಳಿ ಕ್ಷೇತ್ರದಿಂದ ಗೆದ್ದಿದ್ದೇನೆ‌. ಸೋತಾಗ ಅನೇಕ ಹಿತೈಷಿಗಳು ಬಿಜೆಪಿ ಬಿಟ್ಟು ಬೇರೆ ಪಕ್ಷ ಸೇರುವಂತೆ ಸಲಹೆ ನೀಡಿದ್ದರು. ಆಗ ನಾನು, ನಮಗೆ ಆರ್​ಎಸ್​ಎಸ್ ಉತ್ತಮ ಸಂಸ್ಕಾರ ನೀಡಿದೆ. ಮಂತ್ರಿ ಅಥವಾ ಶಾಸಕನಾಗಲು ರಾಜಕಾರಣಕ್ಕೆ ಸೇರಿದ್ದಲ್ಲ, ಯಾವುದೇ ಮಂತ್ರಿಸ್ಥಾನ ನೀಡದಿದ್ದರೂ ಕೊನೆಯುಸಿರು ಇರುವವರೆಗೂ ನಾನು ಪಕ್ಷ ಬಿಡುವುದಿಲ್ಲ ಎಂದಿದ್ದೆ. ಇಷ್ಟು ದಿ‌ನ ಕಾದಿದ್ದಕ್ಕಾಗಿ ಇಂದು ಹಿರಿಯರು ನನ್ನನ್ನು ಗುರುತಿಸಿ ಉನ್ನತ ಸ್ಥಾನಮಾನ ನೀಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಹಳೇ ವಿದ್ಯಾರ್ಥಿಯಾದ ಸಂಸದ ಬಿ.ವೈ ರಾಘವೇಂದ್ರ ಅವರಿಗೂ ಸನ್ಮಾನಿಸಿ ಗೌರವಿಸಲಾಯಿತು.

ABOUT THE AUTHOR

...view details