ಶಿವಮೊಗ್ಗ:ಶಿಕಾರಿಪುರ ತಾಲೂಕು ಉಡುತಡಿಯಲ್ಲಿ ಶಿವಶರಣೆ ಅಕ್ಕಮಹಾದೇವಿ ಅವರ 65 ಅಡಿ ಎತ್ತರದ ಪುತ್ಥಳಿ ಅನಾವರಣಗೊಳಿಸಿ ವೇದಿಕೆಯಲ್ಲಿ ಮಾತನಾಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಈ ಕಾರ್ಯಕ್ರಮಕ್ಕಾಗಿ ಹಗಲು ರಾತ್ರಿ ಶ್ರಮಿಸಿದ ರಾಘವೇಂದ್ರಗೆ ಅಭಿನಂದನೆ ಸಲ್ಲಿಸುತ್ತೇನೆ. ಶಿಕಾರಿಪುರ ತಾಲೂಕು ಅನೇಕ ಶಿವ ಶರಣ- ಶರಣೆಯರಿಗೆ ಜನ್ಮ ನೀಡಿದೆ. ಇಂತಹ ಪ್ರದೇಶದಲ್ಲಿ ಹುಟ್ಟಿದ್ದೆ ನಮ್ಮ ಪುಣ್ಯ ಎಂದು ಬಿಎಸ್ವೈ ಹೇಳಿದರು. ನನಗೆ 80 ವರ್ಷ ಮುಗಿದಿದ್ದು, ನಾನು ರಿಟೈರ್ಡ್ ಆಗಲ್ಲ, ಟೈಯರ್ಡ್ ಕೂಡಾ ಆಗಿಲ್ಲ. ಆದರೆ ರಾಜಕೀಯ ಚುನಾವಣೆಯಲ್ಲಿ ಸ್ಫರ್ಧೆ ಮಾಡುವುದಿಲ್ಲ ಎಂದು ಹೇಳಿದರು.
ನಾನು ರಾಜಕೀಯ ಚುನಾವಣೆಯಿಂದ ದೂರ ಬಂದಿರುವುದಕ್ಕೆ ವಿರೋಧ ಪಕ್ಷದವರು ಅನೇಕ ಟೀಕೆ ಮಾಡುತ್ತಿದ್ದಾರೆ. ನಾನು ಅವರಿಗೆ ಉತ್ತರ ನೀಡಲ್ಲ. ಅವರಿಗೆ ರಾಜ್ಯದ್ಯಾಂತ ಪ್ರವಾಸ ಮಾಡಿ, 150 ಸ್ಥಾನ ಸೀಟು ಗಳಿಸಿ, ಮತ್ತೆ ಬಿಜೆಪಿ ಅನ್ನು ಅಧಿಕಾರಕ್ಕೆ ತರುವ ಮೂಲಕ ಉತ್ತರ ನೀಡುತ್ತೇನೆ ಎಂದರು. ಅನೇಕ ಮಠಗಳಿಗೆ ನಮ್ಮ ಕೈಲಾದ ಅನುದಾನ ನೀಡಿದ್ದೇನೆ. ಸಿಎಂ ಬೊಮ್ಮಯಿ ಅವರು ಸಹ ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇಲ್ಲಿ ಮುಂದೆ ಪ್ರವಾಸೋದ್ಯಮಕ್ಕೆ ಒತ್ತು ನೀಡಿ ಥೀಮ್ ಪಾರ್ಕ್ ಮಾಡಲಾಗುತ್ತದೆ. ಇಲ್ಲಿಗೆ ಬಂದ ಜನರು ಒಂದೆರಡು ಗಂಟೆ ಕಾಲ ಇದ್ದು ಸುತ್ತಾಡಿಕೊಂಡು ಹೋಗಬೇಕು ಎಂದರು.
ಶಿಕಾರಿಪುರ ಶರಣ ಕುಲಕ್ಕೆ ಜನ್ಮನೀಡಿದ ಪುಣ್ಯ ಭೂಮಿ:ಬಳಿಕ ವೇದಿಕೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಅಲ್ಲಮಪ್ರಭುವಿನಂತೆ ಶಿರಾಳಕೊಪ್ಪ ಹಾಗೂ ಬಸವಕಲ್ಯಾಣವನ್ನು ಅಭಿವೃದ್ದಿ ಪಡಿಸಿದ್ದಾರೆ ಎಂದು ಹೇಳಿದರು. 12 ನೇ ಶತಮಾನದ ಶಿವಶರಣೆ, ನಮ್ಮೆಲ್ಲರ ಆತ್ಮ ಜಾಗೃತಿ ಆಗಿರುವ ಅಕ್ಕಮಹಾದೇವಿ ಪುತ್ಥಳಿ ಅನಾವರಣಗೊಳಿಸಿದ್ದೇನೆ. ಈ ಪುಣ್ಯ ಭೂಮಿ ಶರಣ ಕುಲಕ್ಕೆ ಜನ್ಮನೀಡಿದ ಅದ್ದೂತ ಭೂಮಿ. ಇಲ್ಲಿಂದ ಹೊರಟ ಶಿವ ಶರಣರು ಕರ್ನಾಟಕದಲ್ಲಿ ಎಲ್ಲಾ ಸಮುದಾಯ ಕಾಯಕ ಕಲ್ಪಿಸಿದ ಅನುಭವ ಮಂಟಪ ರಚಿಸಿದರು. ಅಲ್ಲಮಪ್ರಭು ಅವರಿಗೆ ಅನುಭವ ಮಂಟಪದ ಅಧ್ಯಕ್ಷ ಸ್ಥಾನ ನೀಡಿದ್ದು ವಿಸ್ಮಯ ಎಂದರು.
ಬಿಎಸ್ವೈ ರಾಜಕೀಯವಾಗಿ ನಿವೃತ್ತಿ ಆಗಲ್ಲ:ಯಡಿಯೂರಪ್ಪ 9 ಶತಮಾನಗಳ ನಂತರ ಶಿವಶರಣರ ನಾಡನ್ನು ಅಭಿವೃದ್ದಿ ಪಡಿಸಿ, ಅನುಭವ ಮಂಟಪಕ್ಕೆ 600 ಕೋಟಿ ರೂ ನೀಡಿದರು. ಎರಡು ಕಡೆ ಅವರು ಮಾಡಿದ ಕೆಲಸ ಮುಂದಿನ 10 ಪೀಳಿಗೆ ನೆನಪಿನಲ್ಲಿಡುತ್ತದೆ. ಇವರನ್ನು ಪಡೆದ ಕ್ಷೇತ್ರದ ಜನರೆ ಪುಣ್ಯವಂತರು ಬೊಮ್ಮಾಯಿ ಗುಣಗಾನ ಮಾಡಿದರು.