ಶಿವಮೊಗ್ಗ:ನಾನು ರಾಜಕೀಯ ಪ್ರಚಾರಕ್ಕೆ ಹೋಗುತ್ತೇನೆ. ಆದರೆ ರಾಜಕೀಯಕ್ಕೆ ಬರಲ್ಲ ಎಂದು ನಟ ಶಿವರಾಜ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸೊರಬದ ಕುಬಟೂರು ಗ್ರಾಮದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಚಿತ್ರರಂಗದಲ್ಲಿಯೇ ಉಳಿದುಕೊಳ್ಳುತ್ತೇನೆ. ನಮ್ಮ ಆಪ್ತರಾದ ಕೆಲವರ ಪರ ಚುನಾವಣಾ ಪ್ರಚಾರ ನಡೆಸುತ್ತೇನೆ ಎಂದರು.
ಮುಂದುವರೆದು ಮಾತನಾಡಿ, ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಪರ ಪ್ರಚಾರ ನಡೆಸುತ್ತೇನೆ. ಶೆಟ್ಟರ್ ನಮಗೆ ಮೊದಲಿನಿಂದಲೂ ಪರಿಚಯ. ಹುಬ್ಬಳ್ಳಿಗೆ ಹೋದಾಗಲೆಲ್ಲ ಅವರ ಮನೆಗೆ ಭೇಟಿ ನೀಡುತ್ತೇನೆ ಎಂದು ಹೇಳಿದರು. ಸಾಗರದಲ್ಲಿ ಗೋಪಾಲಕೃಷ್ಣ ಬೇಳೂರು, ವರುಣದಲ್ಲಿ ಸಿದ್ದರಾಮಯ್ಯ ಪರ ನಾನು ಪ್ರಚಾರ ನಡೆಸಲಿದ್ದೇನೆ. ಉಳಿದಂತೆ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದೇನೆ ಎಂದು ತಿಳಿಸಿದರು.
ನನಗೆ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಜೆ.ಹೆಚ್.ಪಟೇಲ್, ಧರ್ಮಸಿಂಗ್ ಇವೆರೆಲ್ಲರೂ ಬಹಳ ಆತ್ಮೀಯರು. ಗೀತಾ ರಾಜಕೀಯಕ್ಕೆ ಬಂದಿದ್ದಾರೆ. ಅವರು ಶಕ್ತಿಧಾಮದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಾನು ರಾಜಕೀಯಕ್ಕೆ ಬರಲ್ಲ. ಬೇಕಾದರೆ ಸಹಾಯ ಮಾಡುತ್ತೇನೆ. ಅದನ್ನು ಬಿಟ್ಟರೆ ಬೇರೆ ಹೆಚ್ಚಿನ ಸಹಾಯ ಮಾಡಲು ಆಗಲ್ಲ. ನಾನು ಮಾನವೀಯತೆಯ ಆಧಾರದ ಮೇಲೆ ಪ್ರಚಾರ ಮಾಡುತ್ತೇನೆ ಅಷ್ಟೆ ಎಂದು ಹೇಳಿದರು.