ಶಿವಮೊಗ್ಗ:''ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಮೊದಲು ಮಧು ಬಂಗಾರಪ್ಪ ಎಂದು ಗೊತ್ತಿಲ್ಲ. ಈಗ ಯಾರು ಅಂತ ಗೊತ್ತಿಲ್ಲ'' ಎಂದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಸಚಿವ ಮಧು ಬಂಗಾರಪ್ಪ ವಿರುದ್ಧ ಮತ್ತೆ ಅಸಮಾಧಾನ ಹೊರಹಾಕಿದ್ದಾರೆ. ಶಿವಮೊಗ್ಗದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ''ಇಂದು ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕೆಡಿಪಿ ಸಭೆ ನಡೆಯಲಿದೆ. ನನಗೆ ಇಂದಿನ ಕೆಡಿಪಿ ಸಭೆಗೆ ಕರೆದಿಲ್ಲ. ಇದರಿಂದ ನಾನು ಆ ಸಭೆಗೆ ಹೋಗುವುದಿಲ್ಲ'' ಎಂದರು.
''ನನ್ನದು ಯಾವುದೇ ಸಮಸ್ಯೆ ಇಲ್ಲ. ದೆಹಲಿ ನಾಯಕರು ನಮಗೆ ಗೊತ್ತಿಲ್ಲ. ನಮಗೆ ರಾಜ್ಯದ ನಾಯಕರು ಮಾತ್ರ ಗೊತ್ತು. ನಾನು ಕ್ಷೇತ್ರದ ಜನರಿಂದ ಗೆದ್ದಿದ್ದು, ಯಾರಿಂದಲೂ ಗೆದ್ದಿಲ್ಲ'' ಎಂದ ಅವರು, ''ನನಗೆ ಇಷ್ಟು ದಿನ ಮಂತ್ರಿ ಸ್ಥಾನ ಸಿಗದೇ ಇರುವುದಕ್ಕೆ ಅಸಮಾಧಾನ ಇಲ್ಲ. ಆದರೆ, ನನಗೂ ಮಂತ್ರಿ ಸ್ಥಾನ ನೀಡಿ ಎಂಬುದು ನನ್ನ ಬೇಡಿಕೆ. ನಾನು ಯಾವುದೇ ಭಿನ್ನಮತ ಮಾಡಲ್ಲ. ನಾನು ಹೆದರಿಕೊಂಡು ಹೋಗಲು ಕುಮಾರ ಬಂಗಾರಪ್ಪ ಅಲ್ಲ. ನಾನು ಗೋಪಾಲಕೃಷ್ಣ ಬೇಳೂರು''ಎಂದು ಹೇಳಿದರು.
ಬಿಜೆಪಿ ಬರ ಅಧ್ಯಯನ ಪ್ರವಾಸಕ್ಕೆ ಕಿಡಿ:''ಬಿಜೆಪಿ ನಾಯಕರು ಬರ ಅಧ್ಯಯನ ಮಾಡಲು ಹೊರಟಿರುವುದು ಸಂತೋಷ. ಆದರೆ, ಅದನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಸರಿಯಲ್ಲ. ಸಿಎಂ ಬರಕ್ಕಾಗಿ ಹಣ ಬಿಡುಗಡೆ ಮಾಡಿದ್ದಾರೆ. ವಿಪಕ್ಷ ನಾಯಕರಿಲ್ಲದೇ ಬರ ಅಧ್ಯಯನಕ್ಕೆ ಹೊರಟಿದ್ದು ಸರಿಯಲ್ಲ. ಹಿಂದೆ, ಪ್ರವಾಹ ಬಂದಾಗ ನೀವು ಸಮೀಕ್ಷೆ ಮಾಡಿ ಕಳುಹಿಸಿದ ವರದಿಗೆ ಹಣ ಬಂದಿತ್ತೆ ಎಂದು ಪ್ರಶ್ನೆ ಮಾಡಿದರು. ನೀವು ಈಶ್ವರಪ್ಪ, ಕಟೀಲು ಕರೆದುಕೊಂಡು ಹೋಗುತ್ತಿರುವುದು ಸರಿಯಲ್ಲ. ಕಳೆದ ಭಾರಿ ಪ್ರವಾಹದಿಂದ ಕುಸಿದಿರುವ ಮನೆಗಳಿಗೆ ಪರಿಹಾರದ ಹಣ ಇನ್ನೂ ಬಂದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಸಹ ಬರ ವೀಕ್ಷಣೆ ಮಾಡಬೇಕು'' ಎಂದು ಒತ್ತಾಯಿಸಿದರು.
ಶಾಸಕರನ್ನು ಕೂಡಿ ಹಾಕಿಕೊಂಡಿದ್ದ ಹೆಚ್ಡಿಕೆ:''ಜೆಡಿಎಸ್ ಹಾಗೂ ಬಿಜೆಪಿಯವರು ಜಂಟಿಯಾಗಿ ಬರ ಅಧ್ಯಯನಕ್ಕೆ ಹೊರಟಿದ್ದಾರೆ. ಎರಡು ಪಕ್ಷದ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿದ್ದಾರೆ. ಇದರಿಂದ ಕುಮಾರಸ್ವಾಮಿ ಅವರು, ತಮ್ಮ ಶಾಸಕರನ್ನು ರೆಸಾರ್ಟ್ನಲ್ಲಿ ಕೂಡಿಹಾಕಿಕೊಳ್ಳುತ್ತಿದ್ದಾರೆ. ಆದರೂ ಸಹ ಅವರು ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ. ಬಿಜೆಪಿ ಶಾಸಕರು ಸಹ ಬರುತ್ತಿದ್ದಾರೆ. ಕುಮಾರಸ್ವಾಮಿ ಅವರು ಮೋದಿ ಬಳಿ ಕಾಂಗ್ರೆಸ್ ಮುಗಿಸುತ್ತೇನೆ ಎಂದು ಹೇಳಿ ಬಂದು ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಆಗುತ್ತಿಲ್ಲ'' ಎಂದು ಟೀಕಿಸಿದರು.