ಶಿವಮೊಗ್ಗ: ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ವಿಷಯದಲ್ಲಿ ತಾವು ಯಾರಿಂದಲೂ ಹಣ ಪಡೆದಿಲ್ಲವೆಂದು ಬಿಜೆಪಿ ಮುಖಂಡ ಎಸ್ ಮಂಜುನಾಥ್ ಸ್ಪಷ್ಟನೆ ನೀಡಿದ್ದಾರೆ.
ನೆರೆ ಸಂತ್ರಸ್ತರ ಪರಿಹಾರ ಹಂಚಿಕೆಯಲ್ಲಿ ಗೋಲ್ಮಾಲ್ ಆರೋಪ: ಬಿಜೆಪಿ ಮುಖಂಡನ ಸ್ಪಷ್ಟನೆ ಏನು? - 10 ಸಾವಿರ ರೂ ಪರಿಹಾರ
ಬ್ಯಾಂಕ್ ಅಕೌಂಟ್ ತಪ್ಪಾದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ನೆರೆ ಪರಿಹಾರವನ್ನು ತಡೆಹಿಡಿಯಲಾಗಿದೆ. ಆದರೆ, ಕೆಲ ಸಂತ್ರಸ್ತರು ಪರಿಹಾರ ಕೊಡಿಸುವುದಾಗಿ 3,000 ರೂ. ಲಂಚ ಪಡೆದಿದ್ದೇನೆ ಎಂದು ನನ್ನ ಬಗ್ಗೆ ಮಾಡುತ್ತಿರುವ ಆರೋಪ ನಿರಾಧಾರ ಎಂದು ಬಿಜೆಪಿ ಮುಖಂಡ ಎಸ್ ಮಂಜುನಾಥ್ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಶಿಪುರ, ಸಿದ್ದರಾಮ ಬಡಾವಣೆಯಲ್ಲಿ ನೆರೆಹಾವಳಿಗೆ ಹಲವು ಕುಟುಂಬಸ್ಥರು ಸಂತ್ರಸ್ತರಾಗಿದ್ದಾರೆ. ಅವರೆಲ್ಲ ಭಾಗಶಃ ಮನೆಗಳನ್ನು ಕಳೆದುಕೊಂಡಿದ್ದಾರೆ. ಹಾಗಾಗಿ ನಗರಪಾಲಿಕೆ ಸುಮಾರು 70 ಜನರ ಪಟ್ಟಿಮಾಡಿ ಅದರಲ್ಲಿ 18 ಜನರಿಗೆ ತಲಾ 10 ಸಾವಿರ ರೂ. ಪರಿಹಾರ ನೀಡಿದೆ. ಇದರಲ್ಲಿ ಆರು ಜನರ ದಾಖಲಾತಿಗಳು ಸರಿಯಿಲ್ಲದ ಕಾರಣ ಹಾಗೂ ಬ್ಯಾಂಕ್ ಅಕೌಂಟ್ ತಪ್ಪಾದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಪರಿಹಾರ ವಿತರಣೆ ತಡೆಹಿಡಿಯಲಾಗಿದೆ ಎಂದರು.
ಪರಿಹಾರವನ್ನು ತಡೆಹಿಡಿದಿದಕ್ಕೆ ಕೆಲವರು ತನ್ನ ವಿರುದ್ಧಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಪರಿಹಾರ ಕೊಡಿಸುವುದಾಗಿ 3,000 ರೂ. ಲಂಚ ಪಡೆದಿದ್ದೇನೆ ಎಂದು ಆರೋಪ ಮಾಡಿದ್ದಾರೆ. ಇದು ಕೆಲ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದಕ್ಕೆ ಈ ಸ್ಪಷ್ಟೀಕರಣ ನೀಡುತ್ತಿದ್ದೇನೆ. ಇದೊಂದು ಅನಗತ್ಯ ಗೊಂದಲ, ಇದರಿಂದ ನನಗೆ ನೋವಾಗಿದೆ. ಈ ಸಂಬಂಧ ಕಾನೂನು ಹೋರಾಟ ಸಹ ಮಾಡುತ್ತೇನೆ ಎಂದು ಮಂಜುನಾಥ ಹೇಳಿದ್ದಾರೆ.