ಶಿವಮೊಗ್ಗ :ನಾನು ಇಷ್ಟು ದಿನ ಅಧಿವೇಶನದಲ್ಲಿ ಪ್ರಶ್ನೆ ಕೇಳುವ ಸ್ಥಾನದಲ್ಲಿದ್ದೆ. ಈಗ ಪ್ರಶ್ನಗೆ ಉತ್ತರ ನೀಡುವ ಸ್ಥಾನದಲ್ಲಿದ್ದೇನೆ. ತುಂಬಾ ಸಂತೋಷವಾಗುತ್ತದೆ. ಅಧಿವೇಶನವನ್ನು ಸಮರ್ಥವಾಗಿ ಎದುರಿಸುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ನಾನು ಮಂತ್ರಿಯಾದ ಮೇಲೆ ಮೊದಲ ಅಧಿವೇಶನ. ನನ್ನ ಹಿಂದೆ ಸಿಎಂ ಬೊಮ್ಮಾಯಿ, ಯಡಿಯೂರಪ್ಪನವರಿದ್ದಾರೆ. ನಾನು ಈಗಾಗಲೇ ಗೃಹ ಇಲಾಖೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ ಎಂದರು.
ಸಾರ್ವಜನಿಕರ ಸಹಕಾರ ಮುಖ್ಯ :ಮಾದಕ ವಸ್ತುಗಳ ಸಾಗಾಟ, ಮಾರಾಟದ ಬಗ್ಗೆ ನಮ್ಮ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿದೆ. ಪ್ರತಿವರ್ಷ ಟನ್ ಗಟ್ಟಲೆ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ. ಗಾಂಜಾ ಎಲ್ಲಾ ಕಡೆ ಇದೆ. ಇದನ್ನು ತಡೆಯಲು ಸಾರ್ವಜನಿಕರು ಸಹಕರಿಸಬೇಕೆಂದು ತಿಳಿಸಿದರು.