ಶಿವಮೊಗ್ಗ: ಮಲೆನಾಡಿನ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸಹ್ಯಾದ್ರಿ ಕಾಲೇಜು ಕೂಡ ಒಂದು. ಈ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಉಪನ್ಯಾಸಕರಿಲ್ಲದೇ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಕಾಲೇಜು ಪ್ರಾರಂಭವಾಗಿ ಎರಡು ತಿಂಗಳು ಕಳೆಯುತ್ತಿದ್ದರು ಪ್ರಸಕ್ತ ಸಾಲಿನ ಶೈಕ್ಷಣಿಕ ತರಗತಿಗಳು ಇನ್ನೂ ಪ್ರಾರಂಭವಾಗಿಲ್ಲ ಎಂದು ನೂರಾರು ವಿದ್ಯಾರ್ಥಿಗಳು ಕಾಲೇಜಿನ ಮುಂಭಾಗ ಇಂದು ಪ್ರತಿಭಟನೆ ನಡೆಸಿದರು.
ಸಹ್ಯಾದ್ರಿ ಕಾಲೇಜು ತನ್ನದೆ ಆದ ಘನತೆ ಹೊಂದಿದೆ. ಈ ಕಾಲೇಜಿನಲ್ಲಿ ಕುವೆಂಪು, ಪಿ. ಲಂಕೇಶ್ ಅವರಂತ ಅನೇಕರು ಪಾಠ ಮಾಡಿದ್ದಾರೆ. ಅನೇಕ ಗಣ್ಯರು ಇಲ್ಲಿ ವಿದ್ಯಾಬ್ಯಾಸ ನಡೆಸಿದ್ದಾರೆ. ಸಹ್ಯಾದ್ರಿ ಕುವೆಂಪು ವಿಶ್ವ ವಿದ್ಯಾನಿಲಯದ ವ್ಯಾಪ್ತಿಗೆ ಒಳಪಟ್ಟ ಒಂದು ಸ್ವಾಯತ್ತ ಕಾಲೇಜು. ಕಾಲೇಜಿನಲ್ಲಿ ಒಟ್ಟು 2400 ವಿದ್ಯಾರ್ಥಿಗಳಿದ್ದಾರೆ. ಕಲಾ ಕಾಲೇಜು ಪ್ರಾರಂಭವಾಗಿ ಎರಡು ತಿಂಗಳ ಬಳಿಕ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಲ್ಪ ಮಟ್ಟಿನ ತರಗತಿ ಪ್ರಾರಂಭವಾಗಿದೆ. ಆದರೆ, ಅಂತಿಮ ವರ್ಷದ ತರಗತಿಗಳಿಗೆ ಇನ್ನೂ ಪ್ರಾರಂಭವಾಗಿಲ್ಲ. ಇದರಿಂದ ಅಂತಿಮ ವರ್ಷದ ವಿದ್ಯಾರ್ಥಿಗಳ ಭವಿಷ್ಯ ಕಾಡಲಾರಂಭಿಸಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.
ಪ್ರಥಮ ವರ್ಷ ಮತ್ತು ದ್ವಿತೀಯ ವರ್ಷದ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆಕ್ಟೋಬರ್ 5 ರಿಂದ ತರಗತಿಗಳು ಆರಂಭವಾಗಿವೆ. ನಾವು ಕೇಳಿದಾಗಲೆಲ್ಲ ದಸರಾ, ದೀಪಾವಳಿ ರಜೆ ಮುಗಿದ ನಂತರ ತರಗತಿ ಆರಂಭವಾಗುತ್ತವೆ ಎಂದು ತಿಳಿಸಿದ್ದರು. ಆದರೆ, ಈವರೆಗೆ ಕ್ಲಾಸ್ಗಳು ಆರಂಭವಾಗಿಲ್ಲ. ನಂತರ ಕೇಳಿದಾಗ ಅತಿಥಿ ಉಪನ್ಯಾಸಕರ ನೇಮಕದ ನಂತರ ಎಂದು ತಿಳಿಸಿದ್ದರು. ಕೆಲವು ಅತಿಥಿ ಉಪನ್ಯಾಸಕರು ಮಾನವೀಯತೆಯಿಂದ ತರಗತಿಗಳನ್ನು ಕೆಲವು ದಿನ ತೆಗೆದುಕೊಂಡರು. ಈಗ ಅವರು ನಮಗೆ ಇನ್ನೂ ನೇಮಕಾತಿ ಆದೇಶ ನೀಡಿಲ್ಲ. ಪ್ರಾಚಾರ್ಯರನ್ನು ಕೇಳಿ ಎನ್ನುತ್ತಿದ್ದಾರೆ. ಪೂರ್ಣಕಾಲಿಕ ಅಧ್ಯಾಪಕರು ಮೊನ್ನೆವರೆಗೂ ಮೌಲ್ಯಮಾಪನ ಕೆಲಸಗಳಿಗೆ ಹೋಗಿದ್ದೆವು ಎನ್ನುತ್ತಿದ್ದಾರೆ. ನಾವು ಯಾರಿಂದ ಪಾಠ ಕೇಳಬೇಕು? ಈ ರೀತಿಯಾದರೆ ನಮ್ಮ ಗತಿ ಏನು? ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.