ಶಿವಮೊಗ್ಗ : ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆ ಈಗಾಗಲೇ ಜಾರಿಯಾಗಿದ್ದು, ಇದರ ಸದುಪಯೋಗವನ್ನು ಕೋಟ್ಯಂತರ ಫಲಾನುಭವಿಗಳು ಪಡೆಯುತ್ತಿದ್ದಾರೆ. ಅದರಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಸಹ ಲಕ್ಷಾಂತರ ಮಂದಿ ಈ ಯೋಜನೆಯ ಉಪಯೋಗ ಪಡೆದುಕೊಂಡಿದ್ದಾರೆ.
ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಯೋಜನೆಯು ಬೆಲೆ ಏರಿಕೆಯಿಂದ ಬಳಲುತ್ತಿರುವ ಜನ ಸಾಮಾನ್ಯರಿಗೆ ವರದಾನವಾಗಿದೆ. ಗೃಹಜ್ಯೋತಿ ಅನುಷ್ಠಾನದಲ್ಲಿ ಅತ್ಯಂತ ಸರಳ ಹಾಗೂ ಪಾರದರ್ಶಕ ವ್ಯವಸ್ಥೆಯನ್ನು ಸರ್ಕಾರ ಜಾರಿಗೊಳಿಸಿದೆ. ರಾಜ್ಯದ ಎಲ್ಲ ಗೃಹ ಬಳಕೆ ವಿದ್ಯುತ್ ಗ್ರಾಹಕರು ಈ ಯೋಜನೆಗೆ ಅರ್ಹರಾಗಿದ್ದಾರೆ. ಅರ್ಜಿ ಸಲ್ಲಿಕೆ ಚಾಲನೆಗೊಂಡ ದಿನದಿಂದ ಈವರೆಗೆ ಉತ್ತಮ ಸ್ಪಂದನೆ ದೊರತಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಗೃಹಜ್ಯೋತಿ ಬಳಕೆದಾರರೆಷ್ಟು?: ಗೃಹಜ್ಯೋತಿ ಯೋಜನೆಗೆ ಶಿವಮೊಗ್ಗ ವೃತ್ತದ ವ್ಯಾಪ್ತಿಯಲ್ಲಿ ಉತ್ತಮ ಸ್ಪಂದನೆ ದೊರೆತಿದೆ. ಶೇ. 80 ರಷ್ಟು ಗ್ರಾಹಕರು ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ದಿನಾಂಕ 20-08-2023 ರವರೆಗೆ ಶಿವಮೊಗ್ಗ ವೃತ್ತ ವ್ಯಾಪ್ತಿಯಲ್ಲಿ ಒಟ್ಟು 2,63,400 ಗ್ರಾಹಕರಿಗೆ ಗೃಹಜ್ಯೋತಿ ಬಿಲ್‍ಗಳನ್ನು ವಿತರಿಸಲಾಗಿದೆ. ಒಟ್ಟು 2,05,992 ಗ್ರಾಹಕರಿಗೆ ಶೂನ್ಯ ಬಿಲ್‍ಗಳನ್ನು ವಿತರಿಸಲಾಗಿದೆ. ಶೂನ್ಯ ಬಿಲ್ ಸಬ್ಸಿಡಿ ಮೊತ್ತ 5,39,54,539 ರೂ. ಆಗಿರುತ್ತದೆ. 57,408 ಗ್ರಾಹಕರಿಗೆ ನೆಟ್ ಬಿಲ್‍ಗಳನ್ನು ನೀಡಲಾಗಿದ್ದು, ನೆಟ್ ಬಿಲ್ ಸಬ್ಸಿಡಿ ಮೊತ್ತ ರೂ. 2,59,21,565 ಆಗಿರುತ್ತದೆ ಎಂದು ಮೆಸ್ಕಾಂನ ಶಿವಮೊಗ್ಗ ವೃತ್ತದ ನಿಯಂತ್ರಣಾಧಿಕಾರಿ ನಾಮದೇವ.ಎನ್.ವಿ ಅವರು ಮಾಹಿತಿ ನೀಡಿದ್ದಾರೆ.
ಗೃಹ ವಿದ್ಯುತ್ ಬಳಕೆದಾರರಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದ್ದು, ವಾಣಿಜ್ಯ ಬಳಕೆದಾರರು ಈ ಯೋಜನೆ ವ್ಯಾಪ್ತಿಗೆ ಬರುವುದಿಲ್ಲ. ಬಾಡಿಗೆದಾರು, ವಸತಿ ಸಮುಚ್ಚಯ (ಅಪಾರ್ಟ್‍ಮೆಂಟ್) ಮಾಲಿಕರು ಪ್ರತ್ಯೇಕ ವಿದ್ಯುತ್ ಮೀಟರ್ ಅಳವಡಿಸಿದ್ದರೆ ಈ ಯೋಜನೆಯ ಪ್ರಯೋಜನ ಪಡೆಯಲು ಅವಕಾಶವಿದೆ. ಫಲಾನುಭವಿಗೆ ನಿಗದಿಪಡಿಸಿರುವ ವಿದ್ಯುತ್‍ಗಿಂತ ಹೆಚ್ಚುವರಿ ಯೂನಿಟ್ ವಿದ್ಯುತ್ ಬಳಸಿದರೆ, ಬಿಲ್ ಅನ್ನು ಪಾವತಿಸಬೇಕಾಗುತ್ತದೆ. ಮಾಸಿಕ ಬಳಕೆಯು 200 ಯೂನಿಟ್‍ಗಿಂತ ಹೆಚ್ಚಿದ್ದರೆ ಆ ನಿರ್ದಿಷ್ಟ ತಿಂಗಳಿಗೆ ಸಂಪೂರ್ಣ ಬಿಲ್ಅನ್ನು ಪಾವತಿಸಬೇಕು.