ಶಿವಮೊಗ್ಗ: ರೈತಪರ ಹೋರಾಟಗಾರ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಇರುವಕ್ಕಿ ಗ್ರಾಮದ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾನಿಲಯ ಆವರಣದಲ್ಲಿ ಇಂದು ನಡೆದ ಸುಗ್ಗಿ ಸಂಭ್ರಮ-8 (ಘಟಿಕೋತ್ಸವ) ದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವಿವಿಯ ಪರವಾಗಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದರು. ಇದು ಕೃಷಿ ವಿವಿಯ ಎರಡನೇ ಗೌರವ ಡಾಕ್ಟರೇಟ್ ಪ್ರಶಸ್ತಿಯಾಗಿದೆ.
ಗೌರವ ಡಾಕ್ಟರೇಟ್ ಸ್ವೀಕರಿಸಿ ಮಾತನಾಡಿದ ಯಡಿಯೂರಪ್ಪ, ನನ್ನ ಕರ್ಮಭೂಮಿಯಲ್ಲಿ ನಿಮ್ಮೆಲ್ಲರ ಮುಂದೆ ಡಾಕ್ಟರೇಟ್ ಪದವಿ ಪಡೆದಿದ್ದು, ನನ್ನ ಸೌಭಾಗ್ಯ. ನಾನೂ ಕೂಡ ಕೃಷಿ ಕುಟುಂಬದಿಂದ ಬಂದವನು. ಅಧಿಕಾರದ ಅವಧಿಯಲ್ಲಿ ರೈತರ ಪರ ಹಲವು ಯೋಜನೆಗಳನ್ನು ಜಾರಿ ಮಾಡಿದ್ದೇನೆ. ದೇಶದ ಆತ್ಮ ಇರುವುದು ಗ್ರಾಮಗಳಲ್ಲಿ ಎಂದು ಮಹಾತ್ಮ ಗಾಂಧಿ ತಿಳಿಸಿದಂತೆ ಗ್ರಾಮಗಳ ಅಭಿವೃದ್ಧಿಗೆ ಸಾಕಷ್ಟು ಪ್ರಯತ್ನ ನಡೆಸಿದ್ದೇನೆ. ಜೀತಮುಕ್ತಿ, ಬಗರ್ ಹುಕುಂ ಸೇರಿದಂತೆ ಹಲವು ಹೋರಾಟಕ್ಕಾಗಿ ಶಿಕಾರಿಪುರದಿಂದ ಬೆಂಗಳೂರಿಗೆ, ತಲಕಾವೇರಿಯಿಂದ ಕೆಆರ್ಎಸ್ ವರಿಗೆ ಮಾಡಿದ ಎಲ್ಲಾ ಪಾದಯಾತ್ರೆಗಳು ಈಗ ನೆನಪಾಗುತ್ತಿವೆ. ನನಗೆ ಈ ಪದವಿ ಪ್ರದಾನ ಮಾಡಿದ ನಿಮಗೆಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದರು.
ನಂತರ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ, ಯಡಿಯೂರಪ್ಪಗೆ ಅಭಿನಂದನೆಗಳನ್ನು ಸಲ್ಲಿಸಿದರು. ಮಂಡ್ಯದಿಂದ ಶಿವಮೊಗ್ಗಕ್ಕೆ ಬಂದ ಯಡಿಯೂರಪ್ಪ ಬದುಕನ್ನು ಕಟ್ಟಿಕೊಂಡು ರಾಜಕೀಯವಾಗಿ ಸಾಕಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಈ ವಿಶ್ವ ವಿದ್ಯಾನಿಲಯ ಸ್ಥಾಪನೆಗೆ ಕಾರಣಿಕರ್ತರಾಗಿ ಅದೇ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದುಕೊಂಡಿದ್ದಾರೆ. ರಾಜ್ಯದ ಪ್ರಮುಖ ಹೋರಾಟಗಾರರಲ್ಲಿ ಯಡಿಯೂರಪ್ಪ ಸಹ ಒಬ್ಬರು ಎಂದು ಬಿಎಸ್ವೈ ರಾಜಕೀಯ ಹಾದಿಯನ್ನು ಗುಣಮಾನ ಮಾಡಿದರು.
ನಮ್ಮದು ಕೃಷಿ ಹಿನ್ನೆಲೆಯನ್ನು ಹೊಂದಿರುವ ದೇಶ. ರೈತ ನೆಮ್ಮದಿಯಾಗಿದ್ದರೆ ಮಾತ್ರ ಎಲ್ಲರೂ ನೆಮ್ಮದಿಯಾಗಿರುತ್ತಾರೆ. ಇತ್ತೀಚೆಗೆ ಸೆಕಂಡರಿ ಕೃಷಿಗೆ ಹೆಚ್ಚು ಒತ್ತು ನೀಡಲಾಗಿದೆ. ನೀವು ಉದ್ಯೋಗಸ್ಥರಾಗದೇ ಹಲವರಿಗೆ ಉದ್ಯೋಗ ನೀಡುವಂತರಾಗಬೇಕು. ಜಿಡಿಪಿಯಲ್ಲಿ ಕೃಷಿಯು ಪ್ರಗತಿಯಲ್ಲಿದೆ. ನೀವು ಯಾವುದೇ ಉದ್ಯೋಗಗಳಲ್ಲಿ ಇದ್ದರೂ ಸಹ ಕೃಷಿಯನ್ನು ಮರೆಯಬೇಡಿ ಎಂದು ವಿವಿ ವಿದ್ಯಾರ್ಥಿಗಳಿಗೆ ಕೆಲವು ಸಲಹೆಗಳನ್ನು ನೀಡಿದರು.
ಬಳಿಕ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ದೇಶದ ಅರ್ಥ ವ್ಯವಸ್ಥೆಯಲ್ಲಿ ಕೃಷಿ ಬಹುಮುಖ್ಯ. ವಿವಿಯು ಕೃಷಿಗೆ ಸಾಕಷ್ಟು ಬೆಂಬಲ ನೀಡುತ್ತದೆ. ಯಡಿಯೂರಪ್ಪಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಿದ್ದಕ್ಕೆ ಅಭಿನಂದನೆ. ಇವರ ಸೇವೆ ಇನ್ನಷ್ಟು ಜನರಿಗೆ ಸಿಗಲಿ ಎಂದು ಬಿಎಸ್ವೈಗೆ ಅಭಿನಂದನೆ ಸಲ್ಲಿಸಿದರು.