ಶಿವಮೊಗ್ಗ: ಪ್ರಯಾಣಿಕರೊಬ್ಬರು ಆಟೋ ರಿಕ್ಷಾದಲ್ಲಿ ಬಿಟ್ಟು ಹೋಗಿದ್ದ ಹಣವಿದ್ದ ಚೀಲವನ್ನು ಚಾಲಕ ಅದರ ಮಾಲೀಕರಿಗೆ ಮರಳಿಸಿದ್ದಾರೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ತಾವರೆಕೆರೆ ಗ್ರಾಮದ ಮೋಸಿನ್ ಅಹಮ್ಮದ್ ಎಂಬ ಮಹಿಳೆ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ತೆರಳುವ ತರಾತುರಿಯಲ್ಲಿ ಆಟೋದಲ್ಲೇ ಬ್ಯಾಗ್ ಬಿಟ್ಟು ಹೋಗಿದ್ದರು. ಚಾಲಕ ನಾಗರಾಜ್, ಮಹಿಳೆಯನ್ನು ಡ್ರಾಪ್ ಮಾಡಿ ಬೇರೆಡೆ ಬಾಡಿಗೆಗೆ ತೆರಳಿದ್ದಾರೆ. ನಂತರ ಬ್ಯಾಗ್ ಇರುವುದು ಅವರ ಗಮನಕ್ಕೆ ಬಂದಿದ್ದು, ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಪೊಲೀಸರು ಬ್ಯಾಗ್ ಪರಿಶೀಲಿಸಿದಾಗ 8,500 ರೂ ಹಣ, ವಿಳಾಸ ಮತ್ತು ಫೋನ್ ನಂಬರ್ ಪತ್ತೆಯಾಗಿದೆ. ತಕ್ಷಣ ಮಾಲಕರನ್ನು ಕಂಡುಹಿಡಿದು ನಾಗರಾಜ್ ಮೂಲಕವೇ ಬ್ಯಾಗನ್ನು ಮರಳಿ ನೀಡಿದ್ದಾರೆ. ನಾಗರಾಜ್ ಅವರ ಪ್ರಾಮಾಣಿಕತೆಯನ್ನು ಎಸ್ಪಿ ಮಿಥುನ್ ಕುಮಾರ್ ಅಭಿನಂದಿಸಿದ್ದಾರೆ.
ಕುವೆಂಪು ವಿವಿಯಿಂದ ಉದ್ಯೋಗ ಮೇಳ: ಕುವೆಂಪು ವಿಶ್ವವಿದ್ಯಾನಿಲಯದ ವತಿಯಿಂದ ಒಂದು ದಿನದ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಕುಲಪತಿ ಪ್ರೊ.ವೀರಭದ್ರಪ್ಪ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, "ಕುವೆಂಪು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ಸಾವಿರಾರು ವಿದ್ಯಾರ್ಥಿಗಳು ಹೊರಬರುತ್ತಿದ್ದಾರೆ. ಇಂತಹ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ವಿಶ್ವವಿದ್ಯಾನಿಲಯವು ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಫೆಬ್ರವರಿ 4ರಂದು ಉದ್ಯೋಗ ಮೇಳ ಆಯೋಜಿಸಿದೆ. ಮೇಳವನ್ನು ಗೆಟ್ ಲೆಕ್ಟ್ ಎಂಬ ಸಂಸ್ಥೆಯವರ ಸಹಯೋಗದೊಂದಿಗೆ ನಡೆಸಲಾಗುತ್ತಿದೆ" ಎಂದರು.
"ಉದ್ಯೋಗ ಮೇಳದಲ್ಲಿ ಇನ್ಫೋಸಿಸ್, ಫ್ಲಿಪ್ ಕಾರ್ಟ್, ಹೆಚ್ಎಸ್ಬಿಸಿ, ಹೆಚ್ಡಿಎಫ್ಸಿ ಸೇರಿದಂತೆ ಸುಮಾರು 30 ಕಂಪನಿಗಳು ಭಾಗಿಯಾಗಲಿವೆ. ವಿದ್ಯಾರ್ಥಿಗಳು, ನಿರುದ್ಯೋಗಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಉದ್ಯೋಗ ಮೇಳವನ್ನು ಫೆಬ್ರವರಿ 4ರ ಬೆಳಗ್ಗೆ 9 ರಿಂದ ರಾತ್ರಿ 8 ಗಂಟೆಯ ತನಕ ನಡೆಸಲಾಗುವುದು" ಎಂದು ತಿಳಿಸಿದರು.