ಶಿವಮೊಗ್ಗ :ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ಏನೂ ಅಪರಾಧ ಮಾಡದೇ ಇದ್ದರೂ, ಅವರ ಮೇಲೆ ಆರೋಪ ಬಂದಿದೆ. ಆದರೂ, ಅವರು ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕೆಂಬ ಉದ್ದೇಶದಿಂದ ರಾಜೀನಾಮೆ ನೀಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಈಶ್ವರಪ್ಪ ರಾಜೀನಾಮೆ ನೀಡುತ್ತೇನೆಂದು ನನಗೂ ತಿಳಿಸಿದ್ದಾರೆ. ಸಚಿವ ಸ್ಥಾನದಲ್ಲಿದ್ದರೆ, ತನಿಖೆಗೆ ತೊಂದರೆಯಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಯಾವುದೇ ಒತ್ತಡವಿಲ್ಲ ಎಂದು ರಾಜೀನಾಮೆ ನೀಡುತ್ತಿದ್ದಾರೆ. ಒಂದು ವೇಳೆ ಯಾವುದೇ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡುತ್ತಿದ್ದರೆ, ಅದನ್ನು ಅವರೇ ಹೇಳಬೇಕೆಂದರು.
ಕಾಂಗ್ರೆಸ್ ವಿರೋಧ ಪಕ್ಷವಾಗಿ ಏನು ಮಾತನಾಡುತ್ತಾರೋ ಅದು ಮುಖ್ಯವಲ್ಲ. ಈಗಾಗಲೇ ಸಂತೋಷ್ ಪ್ರಕರಣದ ಬಗ್ಗೆ ಪೊಲೀಸರು ಪಾರದರ್ಶಕವಾಗಿ ತನಿಖೆ ನಡೆಸಿದ್ದಾರೆ. ತನಿಖೆಯಲ್ಲಿ ಏನು ಬರುತ್ತೋ ನೋಡೋಣ. ಸಂತೋಷ್ನದ್ದು ಯಾವುದೇ ಡೆತ್ ನೋಟ್ ಇಲ್ಲ. ಅವರು ವಾಟ್ಸ್ಆ್ಯಪ್ನಲ್ಲಿ ಟೈಪ್ ಮಾಡಿ ಕಳಿಸಿದ್ದಾರಷ್ಟೇ.. ಅವರೇ ಟೈಪ್ ಮಾಡಿದ್ದಾರೋ ಅಥವಾ ಬೇರೆಯವರು ಟೈಪ್ ಮಾಡಿದ್ದಾರೋ ತಿಳಿಯಬೇಕಿದೆ. ಅದರ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.