ಶಿವಮೊಗ್ಗ: ತೀರ್ಥಹಳ್ಳಿಯ ಬಾಲಕಿ ನಂದಿತಾ ಪ್ರಕರಣದಲ್ಲಿ ಈಗಾಗಲೇ ಸಾಕ್ಷ್ಯಗಳು ಸತ್ತು ಹೋಗಿವೆ. ಈಗ ಸಿಬಿಐಗೆ ನೀಡಿದರೆ ಏನು ಪ್ರಯೋಜನ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನೆ ಮಾಡಿದ್ದಾರೆ.
ನಗರದ ಪ್ರೆಸ್ ಟ್ರಸ್ಟ್ನಲ್ಲಿ ಪತ್ರಕರ್ತರೊಂದಿಗಿನ ಸಂವಾದದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ನಂದಿತಾ ಸಾವಿನ ಪ್ರಕರಣವನ್ನು ಸಿಬಿಐಗೆ ನೀಡಬೇಕೆಂದು ಇತ್ತಿಚೇಗೆ ಆಗ್ರಹಿಸಿದ್ದರು.
ಈಗ ನಾವು ಒಂದು ಹಂತಕ್ಕೆ ಬೆಳೆದಿದ್ದೇವೆ. ಇಂತಹ ಸಮಯದಲ್ಲಿ ನಾನು ಅವರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎನ್ನುತ್ತಲೇ, ಈಗ ನಂದಿತಾ ಪ್ರಕರಣವನ್ನು ಕಿಮ್ಮನೆ ರತ್ನಾಕರ್ ಅವರು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ. ಹಿಂದೆ ಅವರೇ ಸಚಿವರಾಗಿದ್ದಾಗ ನನ್ನನ್ನು ಸೇರಿದಂತೆ ಸುಮಾರು 300 ಜನರ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದರು.
ಹಿಂದೆ ಅವರು ಸಚಿವರಾಗಿದ್ದಾಗ ಸಿಒಡಿಗೆ ವಹಿಸಿದ್ಧರು. ಆಗ ಬಿ ರಿಪೋರ್ಟ್ ಹಾಕಲಾಗಿದೆ. ಈಗ ಎಲ್ಲಾ ಸಾಕ್ಷ್ಯಗಳನ್ನು ನಾಶ ಮಾಡಿ ಸಿಬಿಐಗೆ ನೀಡಿ ಎನ್ನುತ್ತಿರುವುದು ಸರಿಯಲ್ಲ. ನ್ಯಾಯಯುತವಾದ ತನಿಖೆ ನಡೆಸಿದರೆ, ಅವರ ವೋಟ್ ಬ್ಯಾಂಕ್ ಹಾಳಾಗುತ್ತದೆ ಎಂದು ಸುಮ್ಮನಿದ್ದರು. ಆದರೆ, ಈಗ ಸಿಬಿಐಗೆ ವಹಿಸಿ ಎನ್ನುತ್ತಿದ್ದಾರೆ. ಈಗ ಸಾಕ್ಷ್ಯ ನಾಶವಾಗಿದೆ, ಈಗ ಸಿಬಿಐಗೆ ವಹಿಸಿದರೆ ಏನು ಪ್ರಯೋಜನ ಎಂದರು.