ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಾತನಾಡಿದರು ಶಿವಮೊಗ್ಗ: ಪಿಂಪ್ಗಳಿಂದ ಹಣ ಮಾಡಿಕೊಳ್ಳುವ ಸಂದರ್ಭ ಬಂದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಪಟ್ಟಣದ ಬಂಟರ ಭವನದಲ್ಲಿ ತೀರ್ಥಹಳ್ಳಿ ಬಿಜೆಪಿ ಮಂಡಲದ ವತಿಯಿಂದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಯಾಂಟ್ರೋ ರವಿ ಯಾರೆಂದು ನನಗೆ ಗೊತ್ತಿಲ್ಲ. ನನ್ನ ಮನೆಗೆ ಸಾವಿರಾರು ಜನ ಬಂದು ಹೋಗುತ್ತಾರೆ. ಎಲ್ಲರ ಕ್ಯಾರೆಕ್ಟರ್ ಸರ್ಟಿಫಿಕೇಟ್ ನೋಡಿ ಒಳಗೆ ಬಿಡಲಾಗುವುದಿಲ್ಲ. ವಿನಾಕಾರಣ ನನ್ನ ಹೆಸರು ಹೇಳಿ ಗೊಂದಲ ಹುಟ್ಟಿಸುತ್ತಿರುವುದು ಸರಿಯಲ್ಲ ಎಂದರು.
ಇದು ಮಾಜಿ ಸಿಎಂ ಅವರ ಘನತೆಗೆ ತಕ್ಕುದಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಕುಟುಕಿದರು. ರವಿಯ ಜೊತೆಗೆ ನನಗೆ ಸಂಪರ್ಕ ಇದ್ದರೆ ಅವನನ್ನು ಬಂಧಿಸದಂತೆ ತಡೆಯುವುದು ದೊಡ್ಡ ವಿಚಾರವಾಗಿರಲಿಲ್ಲ. ಅಂಥವನ ಹತ್ತಿರ ದುಡ್ಡು ತೆಗೆದುಕೊಳ್ಳುವ ಸಂದರ್ಭ ಬಂದರೆ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ತಿಳಿಸಿದರು.
ಗುಜರಾತ್ ಪ್ರವಾಸ ಪೂರ್ವ ನಿಯೋಜಿತವಾಗಿತ್ತು:ನನ್ನ ಗುಜರಾತ್ ಕಾರ್ಯಕ್ರಮ ಆರು ತಿಂಗಳು ಮುಂಚೆ ನಿಗದಿ ಆಗಿತ್ತು. ಅದು ಅಪರಾಧ ವಿಧಿವಿಜ್ಞಾನ ಯೂನಿವರ್ಸಿಟಿ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿತ್ತು. ನಾನು ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಹೋಗಿದ್ದೆ. ನಾನು ಪ್ರತಿಕ್ಷಣ ಎಲ್ಲಿಗೆ ಹೋಗಿದ್ದೆ ಎನ್ನುವ ಮಾಹಿತಿ ಸರ್ಕಾರದ ಬಳಿ ಇರುತ್ತದೆ. ವೃಥಾ ಆರೋಪ ಮಾಡುವ ಕಿಮ್ಮನೆ ರತ್ನಾಕರ್ ಮಾಹಿತಿ ಇಟ್ಟುಕೊಂಡು ಮಾತಾಡಲಿ ಎಂದು ತಿರುಗೇಟು ನೀಡಿದರು.
ಕಿಮ್ಮನೆ ರತ್ನಾಕರ್ ಈಗ ತೀರ್ಥಹಳ್ಳಿಯಲ್ಲಿ ಸವೆದುಹೋದ ನಾಣ್ಯವಾಗಿದ್ದರೆ. ಅವರ ಪಕ್ಷದ ಕಾರ್ಯಕರ್ತರೇ ಕಿಮ್ಮನೆ ನಾಯಕತ್ವ ಒಪ್ಪದೆ ಬೇಷರತ್ ಆಗಿ ಬಿಜೆಪಿಗೆ ಸೇರುತ್ತಿದ್ದಾರೆ. ಇದರಿಂದ ಅವರು ಕಂಗೆಟ್ಟು ಹೋಗಿದ್ದಾರೆ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಅಸಂಬದ್ಧವಾಗಿ ಮಾತಾಡುವ ಸ್ಥಿತಿ ತಲುಪಿದ್ದಾರೆ ಎಂದು ಕಿಮ್ಮನೆ ರತ್ನಾಕರ್ ವಿರುದ್ದ ಗರಂ ಆದರು.
ಸ್ಯಾಂಟ್ರೋ ರವಿ ಜೊತೆ ನನ್ನ ಮಗನಿಗೆ ಸಂಬಂಧವಿಲ್ಲ: ಸ್ಯಾಂಟ್ರೋ ರವಿ ಜೊತೆ ನನ್ನ ಮಗನಿಗೆ ಯಾವುದೇ ಸಂಬಂಧವಿಲ್ಲ. ನನ್ನ ಮಗ ಅವನ ಪಾಡಿಗೆ ಅವನಿದ್ದಾನೆ. ನಿಮ್ಮ ಮಗ ಇದ್ದರೂ ಕೂಡ ಇಲ್ಲದ ಹಾಗೆ ಇದ್ದಾರೆ. ನಾನು ನನ್ನ ಮಗನನ್ನು ರಾಜಕಾರಣಕ್ಕೆ ಕರೆದುಕೊಂಡು ಬಂದಿಲ್ಲ. ಅವನು ಕೂಡ ಒಂದಿಷ್ಟು ಹಣವನ್ನು ಕೂಡಿಟ್ಟಿದ್ದಾನೆ. ಅದರ ಲೆಕ್ಕ ನನ್ನ ಮಗ ಕೊಡುತ್ತಾನೆ. ನಾನೂ ಲೆಕ್ಕ ಕೊಡುತ್ತೇನೆ. ಲೋಕಾಯುಕ್ತ ಹಾಗೂ ಆದಾಯ ತೆರಿಗೆ ಇಲಾಖೆಗೆ ಲೆಕ್ಕ ಕೊಡುತ್ತೇನೆ. ಎಲ್ಲವೂ ಕಾನೂನು ಬದ್ಧವಾಗಿದೆ ಎಂದರು.
ಶಾರೀಕ್ ಕುಟುಂಬದ ಕಟ್ಟಡದಲ್ಲಿ ಕಾಂಗ್ರೆಸ್ ಆಫೀಸ್ ಇರುವುದು ಕಾಂಗ್ರೆಸ್ಗೆ ನಾಚಿಕೆ ಆಗಬೇಕು: ಶಂಕಿತ ಉಗ್ರ ಶಾರೀಕ್ ಅವರ ಸಂಬಂಧಿಗಳ ಕಟ್ಟಡದಲ್ಲಿ ಕಚೇರಿ ಹೊಂದಿರುವ ಕಾಂಗ್ರೆಸ್ಗೆ ನಾಚಿಕೆಯಾಗಬೇಕು. ಶಾರೀಕ್ ಒಬ್ಬ ಭಯೋತ್ಪಾದಕ. ಎಷ್ಟು ವರ್ಷದಿಂದ ಆ ಕಟ್ಟಡದಲ್ಲಿ ನಿಮ್ಮ ಕಚೇರಿ ಮಾಡಿಕೊಂಡು ಬೆಳೆಸಿದ್ದೀರಿ ಎಂದು ಪ್ರಶ್ನಿಸಿದರು. ಹತ್ತು ಲಕ್ಷ ರೂ ಕಟ್ಟಡಕ್ಕೆ ಅಡ್ವಾನ್ಸ್ ಕೊಟ್ಟಿದ್ದೀರಿ. ತೀರ್ಥಹಳ್ಳಿಯಲ್ಲಿ ಯಾವ ಕಟ್ಟಡಕ್ಕೆ ಹತ್ತು ಲಕ್ಷ ಇದೆ ಎಂದು ಪ್ರಶ್ನಿಸಿದರು. ಅದಲ್ಲದೇ ಬಾಡಿಗೆ ನೀಡುತ್ತಿದ್ದೀರಾ ? ಎಂದರು. ಶಾರೀಕ್ ಹೇಳಿಕೆಯ ಮೇರೆಗೆ ಎಲ್ಲಕಡೆ ತನಿಖೆ ನಡೆಯುತ್ತಿದೆ. ನಿಮ್ಮ ಪಕ್ಷದ ಮುಖಂಡನನ್ನು ಬ್ರಹ್ಮವರದಲ್ಲಿ ಬಂಧಿಸಿದ್ದಾರೆ. ನಿಮ್ಮ ಪಕ್ಷದ ಹಿನ್ನೆಲೆ ಇದೆ ಅಲ್ವ, ನೀವು ಬೇರೆಯವರಿಗೆ ಹೇಳುತ್ತಿದ್ದೀರಾ ಎಂದು ಗರಂ ಆದರು. ಇದೇ ವೇಳೆ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಕಾಂಗ್ರೆಸ್ನ ಹೊಸಳ್ಳಿ ಸುಧಾಕರ್ ಹಾಗೂ ಇತರರು ಬಿಜೆಪಿ ಸೇರ್ಪಡೆಯಾದರು.
ಓದಿ:ಸ್ಯಾಂಟ್ರೋ ರವಿ ಒಬ್ಬ ಕ್ರಿಮಿನಲ್, ಆತನ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ: ಕೆ ಗೋಪಾಲಯ್ಯ