ಶಿವಮೊಗ್ಗ: ರಾಜಕೀಯ ಪಕ್ಷವಾದ ಹಿಂದೂ ಮಹಾಸಭಾದ ವತಿಯಿಂದ ಗಣಪತಿ ಪ್ರತಿಷ್ಠಾಪಿಸಬೇಕು. ಈ ಮೂಲಕ ದೇಶ ಸ್ವಾತಂತ್ರದ ಕಿಚ್ಚು ಹಚ್ಚಬೇಕೆಂದು ವಿನಾಯಕ ದಾಮೋದರ್ ಸಾವರ್ಕರ್ ಕರೆ ಕೊಟ್ಟಿದ್ದರು. ಅದರ ಮೇರೆಗೆ ಶಿವಮೊಗ್ಗದಲ್ಲಿ 1945ರಲ್ಲಿ ಹಿಂದೂ ಮಹಾಸಭಾದ ವತಿಯಿಂದ ಗಣಪತಿ ಪ್ರತಿಷ್ಠಾಪಿಸಲಾಗಿತ್ತು. ಅಂದಿನಿಂದ ಮಹಾಸಭಾವು ಗಣಪತಿಯನ್ನು ಪ್ರತಿ ವರ್ಷ ಪ್ರತಿಷ್ಠಾಪಿಸಿಕೊಂಡು ಬರುತ್ತಿದೆ. 11 ದಿನಗಳ ಕಾಲ ಶಿವಮೊಗ್ಗ ನಗರದ ಪಾರ್ವತಿ ಭೀಮೇಶ್ವರ ದೇವಾಲಯದಲ್ಲಿ ಇಡಲಾಗುವ ಹಿಂದೂ ಮಹಾಸಭಾ ಗಣಪತಿಗೆ 79 ವರ್ಷಗಳ ಇತಿಹಾಸ.
ಗಣಪತಿ ಸ್ಥಾಪನೆ ಇತಿಹಾಸ:ಸ್ವಾತಂತ್ರದ ಕಿಚ್ಚು ದೇಶದಲ್ಲಿ ಹೆಚ್ಚಾಗಿದ್ದ ಸಮಯದಲ್ಲಿ ಸಾವರ್ಕರ್ ದೇಶದಲ್ಲಿ ಹಿಂದೂ ಮಹಾಸಭಾ ಎಂಬ ರಾಜಕೀಯ ಪಕ್ಷವನ್ನು ಕಟ್ಟುತ್ತಾರೆ. ಪಕ್ಷದ ಕುರಿತು ದೇಶದ ಪ್ರವಾಸ ನಡೆಸುತ್ತಾರೆ. ಅದರಂತೆ 1944ರಲ್ಲಿ ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾದ ಜಿಲ್ಲಾ ಪ್ರಥಮ ಸಮಾವೇಶ ನಡೆಸಲಾಗುತ್ತದೆ. ಈ ಸಮಾವೇಶದಲ್ಲಿ ಸಾವರ್ಕರ್ ಭಾಗಿಯಾಗುತ್ತಾರೆ. ಶಿವಮೊಗ್ಗ ಜಿಲ್ಲೆಯ ಎಸ್.ಬಿ ಮಂಜುನಾಥ್ ರಾವ್ ಅಧ್ಯಕ್ಷತೆಯಲ್ಲಿ ಸಭೆ ನಡೆಯುತ್ತದೆ.
ಈ ಸಮಾವೇಶದಲ್ಲಿ ಸಾವರ್ಕರ್ ಅವರು ಕರೆ ನೀಡಿದ ಮೇರೆಗೆ ಹಿಂದೂ ಮಹಾಸಭಾದ ವತಿಯಿಂದ ಗಣೇಶೋತ್ಸವ ನಡೆಸಲು ತೀರ್ಮಾನ ಮಾಡಲಾಗುತ್ತದೆ. ಈ ವೇಳೆ ಲೋಕಮಾನ್ಯ ಬಾಲಗಂಗಾಧರ ತಿಲಕರು ಸಹ ಗಣೇಶೋತ್ಸವ ನಡೆಸುವ ಮೂಲಕ ದೇಶದ ಜನರಲ್ಲಿ ಜಾಗೃತಿ ಹಾಗೂ ಒಗ್ಗೂಡಿ ಹೋರಾಟ ನಡೆಸಲು ಕರೆ ನೀಡಿರುತ್ತಾರೆ. ಇದರಿಂದ ಪ್ರೇರಿತರಾದ ಶಿವಮೊಗ್ಗದ ಹಿಂದೂ ಮಹಾಸಭಾವು ನಗರದ ಭೀಮೇಶ್ವರ ದೇವಾಲಯದ ಆವರಣದಲ್ಲಿ ಗಣೇಶೋತ್ಸವ ನಡೆಸುತ್ತದೆ. ಈ ಕಾರ್ಯಕ್ರಮ ಇಂದಿಗೂ ಹಾಗೇ ನೆರವೇರಿಸಿಕೊಂಡು ಬರುತ್ತಿದೆ.
ಮಹಾತ್ಮ ಗಾಂಧಿ ಹತ್ಯೆಯಾದ ನಂತರ ಹಿಂದೂ ಮಹಾಸಭಾದ ಬದಲಾಗಿ ಹಿಂದು ಸಂಘಟನಾ ಮಹಾಮಂಡಳಿ ಗಣೇಶೋತ್ಸವವನ್ನು ನಡೆಸಿಕೊಂಡು ಬರುತ್ತಿದೆ. ಹಿಂದೂಗಳ ಅಭ್ಯುದಯ ಹಾಗೂ ಸಂಘಟನೆಯ ದೃಷ್ಟಿಯಿಂದ ಪ್ರಾರಂಭವಾದ ಗಣೇಶೋತ್ಸವ ಇಂದಿಗೂ ಮುಂದುವರೆಯುತ್ತಿದೆ. ಈ ಸಮಿತಿಯಲ್ಲಿ ಶಿವಮೊಗ್ಗ ನಗರದ ಎಲ್ಲಾ ಸಮಾಜ, ರಾಜಕೀಯ ಪಕ್ಷಗಳ ಮುಖಂಡರಿದ್ದಾರೆ.