ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ನಗರದಲ್ಲಿ ಹಿಂದೂ ಧರ್ಮದ ಕಹಳೆ ಮೊಳಗಿದೆ. ಜಗತ್ತಿನ ಶ್ರೇಷ್ಠ ಋಷಿ ಪರಂಪರೆಯ ಪ್ರತಿನಿಧಿಗಳು ಹಿಂದೂಗಳು. ನಮ್ಮ ಪೂರ್ವಜರು ಯುದ್ಧ ಮಾಡಿದವರಲ್ಲ. ಬದಲಾಗಿ ಜಗತ್ತಿನ ಕಲ್ಯಾಣಕ್ಕಾಗಿ ಜೀವನ ಕಳೆದವರು ಎಂದು ಹಿಂದೂ ಜಾಗರಣ ವೇದಿಕೆಯ ಪ್ರಜ್ಞಾ ಪ್ರವಾಹ ಅಖಿಲ ಭಾರತ ಸಹ ಸಂಯೋಜಕ ರಘುನಂದನ್ ಅವರು ಹೇಳಿದರು.
ನಗರದ ಎನ್ಇಎಸ್ ಮೈದಾನದಲ್ಲಿ ಆಯೋಜಿಸಿರುವ ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ 3ನೇ ತ್ರೈಮಾಸಿಕ ಪ್ರಾಂತೀಯ ಕಾರ್ಯಕರ್ತರ ಸಮಾಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಕಾಲದ ನಮ್ಮ ಪೂರ್ವಜರು ಯುದ್ಧ ಮಾಡಿದವರಲ್ಲ. ಬದಲಾಗಿ, ಜಗತ್ತಿನ ಕಲ್ಯಾಣಕ್ಕೆ ತಮ್ಮ ಜೀವನವನ್ನೇ ಮುಡುಪಿಟ್ಟವರು. ವಸುದೈವ ಕುಟುಂಬದ ಚಿಂತನೆ ಕೊಟ್ಟಿದ್ದು ನಮ್ಮ ಹಿಂದೂ ಧರ್ಮದ ಸಮಾಜ. ಆದ್ರೆ, 25 ಸಾವಿರ ದೇವಸ್ಥಾನಗಳನ್ನು ಒಡೆದು ಹಾಕಿ ಜನರಿಗೆ ಮೋಸ ಮಾಡಿದವರು ಯಾರು ಎಂದು ಪ್ರಶ್ನಿಸಿದರು. ಈ ವೇಳೆ ಹಿಂದೂ ಸಂಘಟನೆಯ ಹರ್ಷ ಕಾಮತ್, ದೋ ಕೇಶವಮೂರ್ತಿ, ಡಾ.ತೇಜಸ್ವಿ ಸೇರಿದಂತೆ ಹಿಂದೂ ಜಾಗರಣ ವೇದಿಕೆಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಬೃಹತ್ ಶೋಭಾಯಾತ್ರೆ: ಶಿವಮೊಗ್ಗದಲ್ಲಿ ನಡೆಯುತ್ತಿರುವ ಪ್ರಾಂತ ಸಮ್ಮೇಳನಕ್ಕೆ ಕರ್ನಾಟಕ ದಕ್ಷಿಣ ಪ್ರಾಂತದ 16 ಜಿಲ್ಲೆಗಳಿಂದ ಸುಮಾರು 4000 ಕಾರ್ಯಕರ್ತರು ಭಾಗಿಯಾಗಿದ್ದಾರೆ. ಇಂದು ಬೆಳಗ್ಗೆ 10 ಗಂಟೆಯಿಂದಲೇ ಕಾರ್ಯಕ್ರಮ ಪ್ರಾರಂಭವಾಗಿದ್ದು, ಸಂಜೆ ಬೃಹತ್ ಶೋಭಾಯಾತ್ರೆ ಮೆರವಣಿಗೆ ಹಾಗೂ ಸಾರ್ವಜನಿಕ ಸಭೆ ಜರುಗಲಿದೆ. ಇದಕ್ಕೆ ಮುಖ್ಯ ಅತಿಥಿಯಾಗಿ ಉದ್ಯಮಿ ರಾಮ್ ಮನೋಹರ್ ಶಾಂತವೇರಿ ಅವರು ಪಾಲ್ಗೊಳ್ಳುವರು. ಪ್ರಾಸ್ತಾವಿಕ ಭಾಷಣವನ್ನು ಜಗದೀಶ್ ಕಾರಂತ್ ಮಾಡಲಿದ್ದಾರೆ. ದಿಕ್ಸೂಚಿ ಭಾಷಣವನ್ನು ಸಾದ್ವಿ ಪ್ರಜ್ಞಾಸಿಂಗ್ ಠಾಕೂರ್ ಮಾಡಲಿದ್ದಾರೆ.