ಶಿವಮೊಗ್ಗ: ಬಜರಂಗದಳದ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳು ಸೇರ್ಪಡೆಯಾಗುತ್ತಿದ್ದಾರೆ. ಇಂದು ಪೊಲೀಸರು ಮತ್ತಿಬ್ಬರನ್ನು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
ಶಿವಮೊಗ್ಗದ ವಾದಿ- ಎ- ಹುದಾ ಬಡಾವಣೆಯ ನಿವಾಸಿ ಜಾಫರ್ ಸಾದಿಕ್ ಅಲಿಯಾಸ್ ಭದ್ರುದ್ದಿನ್ ಅಲಿಯಾಸ್ ಭದ್ರಿ(55) ಹಾಗೂ ಭದ್ರಾವತಿ ಹೊಸಮನೆಯ ನಿವಾಸಿ ಅಬ್ದುಲ್ ರೋಶನ್ ಅಲಿಯಾಸ್ ಆರ್.ಸಿ (24) ಎಂಬುವರನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಎರಡು ಕಾರು ಹಾಗೂ 1 ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ.
ಫೆಬ್ರವರಿ 20 ರಂದು ನಡೆದ ಕೊಲೆ ಪ್ರಕರಣದಲ್ಲಿ ಮೊದಲು ಇಬ್ಬರನ್ನು ಬಂಧಿಸಲಾಗಿತ್ತು. ನಂತರ ನಾಲ್ವರನ್ನು ಬಂಧಿಸಲಾಗಿತ್ತು. ಬಳಿಕ ಬುಧವಾರ ಇಬ್ಬರನ್ನು ಹಾಗೂ ಇಂದು ಇಬ್ಬರನ್ನು ಬಂಧಿಸಲಾಗಿದೆ. ಸದ್ಯ ದೊಡ್ಡಪೇಟೆ ಪೊಲೀಸರು ಕೊಲೆ ಆರೋಪಿಗಳ ಹಿಂದೆಯೇ ಬಿದ್ದಿದ್ದು, ಇನ್ನಷ್ಟು ಆರೋಪಿಗಳನ್ನು ಬಂಧಿಸುವ ಸಾಧ್ಯತೆಗಳಿವೆ.
ಇದನ್ನೂ ಓದಿ:ಬ್ಯಾಂಕ್‍ಗಳಿಂದ ಹೂಡಿಕೆ ಹಿಂತೆಗೆದುಕೊಳ್ಳಲು ಸರ್ಕಾರ ತರಾತುರಿ ಮಾಡುತ್ತಿರುವುದು ಆತಂಕಕಾರಿ: ಸಿದ್ದರಾಮಯ್ಯ
ನಿನ್ನೆ ಬಂಧಿತರಾಗಿದ್ದ ಅಬ್ದುಲ್ ಖಾದರ್ ಜಿಲಾನ್ ಹಾಗೂ ಫರಾಜ್ ಪಾಷಾರನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಲಾಗಿದೆ. ಸದ್ಯ ಈ ಇಬ್ಬರನ್ನು ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇತ್ತ ಮೃತ ಹರ್ಷನ ಮನೆಗೆ ರಾಜಕಾರಣಿಗಳ ಭೇಟಿ ಮುಂದುವರೆದಿದೆ.