ಶಿವಮೊಗ್ಗ: ಶಬರಿಮಲೆಗೆ ಹೋಗುವ ಭಕ್ತರಿಗಾಗಿ ಪ್ರಸಾದ ಒದಗಿಸುವ ದೃಷ್ಟಿಯಿಂದ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ವತಿಯಿಂದ ನಗರದಲ್ಲಿ ಮುಷ್ಠಿ ಅಕ್ಕಿ ಸಂಗ್ರಹ ಅಭಿಯಾನ ಪ್ರಾರಂಭಿಸಲಾಯಿತು. ಶಬರಿ ಮಲೆಗೆ ರಾಜ್ಯ ಸೇರಿದಂತೆ ವಿವಿಧ ರಾಜ್ಯದ ಭಕ್ತರು ಹೋಗುತ್ತಾರೆ. ಇವರಿಗೆ ಅನುಕೂಲವಾಗುವಂತೆ ಅನ್ನ ದಾಸೋಹ ಮಾಡಲು ಅಕ್ಕಿ ಸಂಗ್ರಹ ಮಾಡಲಾಗುತ್ತಿದೆ.
ಇಂದು ಶಿವಮೊಗ್ಗದ ರಾಮಣ್ಣ ಶ್ರೇಷ್ಠಿ ಪಾರ್ಕ್ನಿಂದ ಮುಷ್ಟಿ ಅಕ್ಕಿ ಸಂಗ್ರಹ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಶಿವಮೊಗ್ಗದ ಬಸವ ಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ ಅಭಿಯಾನಕ್ಕೆ ಚಾಲನೆ ನೀಡಿದರು. ಇದಕ್ಕೂ ಮುನ್ನ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಅಯ್ಯಪ್ಪ ಅನ್ನ ದಾಸೋಹದ ರಾಷ್ಟ್ರೀಯ ಸದಸ್ಯರಾದ ಕೆ.ಈ. ಕಾಂತೇಶ್ ಹಾಗೂ ಶಬರಿಮಲೆ ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷರು ಹಾಗೂ ಸಮಿತಿಯವರು ಜೊತೆ ಸೇರಿ ಗಣಪತಿಗೆ ಪೂಜೆ ಸಲ್ಲಿಸಿದರು.
ನಂತರ ವಾಹನದ ಜೊತೆ ಸಾಗಿದ ಈಶ್ವರಪ್ಪ, ಕಾಂತೇಶ್ ಹಾಗೂ ಸೇವಾ ಸಮಾಜದವರು ಮನೆ ಮನೆಗೆ ತೆರಳಿ ಮುಷ್ಡಿ ಅಕ್ಕಿ ಸಂಗ್ರಹ ಮಾಡಿದರು. ಸಮಿತಿಯವರು ತಮ್ಮ ಮನೆ ಬಳಿ ಬರುತ್ತಿದ್ದಂತೆಯೇ ಭಕ್ತರು ತಮ್ಮ ಮನೆಯ ಅಕ್ಕಿಯನ್ನು ತಂದು ನೀಡಿದರು. ಈ ವೇಳೆ ಅಭಿಯಾನಕ್ಕೆ ಗಾಂಧಿ ಬಜಾರ ವ್ಯಾಪಾರಿಗಳ ಸಂಘದವರು ಸುಮಾರು 30 ಚೀಲ ಅಕ್ಕಿ ನೀಡಿದರು. ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ದವರು ಕರೆ ನೀಡಿದ ಮೇರೆಗೆ ಅನೇಕ ಜನ ಹತ್ತಾರು ಚೀಲ ಅಕ್ಕಿ ನೀಡಿದ್ದು, ಈಗಾಗಲೇ ಒಂದು ಲೋಡ್ ಅಕ್ಕಿ ಸಂಗ್ರಹವಾಗಿದೆ. ಅಕ್ಕಿ ಜೊತೆ ಬೇಳೆಗಳನ್ನು ಸಂಗ್ರಹಿಸಲಾಗುತ್ತಿದೆ. ನಗರದಲ್ಲಿ ನಾಲ್ಕೈದು ದಿನ ಸಂಚಾರ ಮಾಡಿ ಅಕ್ಕಿಯನ್ನು ಶಬರಿಮಲೆಗೆ ಕಳುಹಿಸಿಕೊಡಲಾಗುವುದು ಎಂದು ಅನ್ನ ದಾಸೋಹದ ರಾಷ್ಟ್ರೀಯ ಸದಸ್ಯ ಕೆ.ಈ. ಕಾಂತೇಶ್ ತಿಳಿಸಿದ್ದಾರೆ.